ಹೈಕೋರ್ಟ್ ಮೆಟ್ಟಿಲೇರಿದ ನಾಡಗೀತೆ ಧಾಟಿ ವಿವಾದ; ರಾಜ್ಯ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ

1212
Published on

ಬೆಂಗಳೂರು: ರಾಷ್ಟ್ರಕವಿ ಕುವೆಂಪು ರಚನೆಯ ನಾಡಗೀತೆ ಗಾಯನ ಧಾಟಿ ಹಾಗೂ ಸಮಯದ ಮಿತಿಗೆ ಸಂಬಂಧಿಸಿದ ವಿವಾದ ಹೈಕೋರ್ಟ್ ಅಂಗಳ ತಲುಪಿದ್ದು, ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವ ಕುರಿತು ಸರ್ಕಾರ ಹೊರಡಿಸಿರುವ ಆದೇಶ ರದ್ದುಕೋರಿ ತಕರಾರು ಅರ್ಜಿ ಸಲ್ಲಿಕೆಯಾಗಿದೆ.

ನಾಡಗೀತೆಯ ಧಾಟಿ ಹಾಗೂ ಸಮಯ ನಿಗದಿಪಡಿಸಿ ಸೆ.25ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಗೆ ತುರ್ತು ನೋಟಿಸ್ ಜಾರಿಗೊಳಿಸಿತು. ಜತೆಗೆ, ಯಾವ ಅಧಿಕಾರ ಹಾಗೂ ನಿಯಮಗಳ ಅಡಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ಅರ್ಜಿದಾರರ ಮನವಿ ಏನು?
ಮೈಸೂರು ಅನಂತಸ್ವಾಮಿಯವರು ಫೂರ್ಣ ನಾಡಗೀತೆಗೆ ರಾಗ ಸಂಯೋಜನೆ ಮಾಡಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೀಗಿದ್ದರೂ, ನಾಡಗೀತೆಯ ರಾಗ, ಧಾಟಿ ಮತ್ತು ಸಮಯದ ಮಿತಿ ಕುರಿತು ಸರ್ಕಾರ ತರಾತುರಿಯಲ್ಲಿ ಆದೇಶ ಹೊರಡಿಸಿದೆ. ಆದ್ದರಿಂದ, ಸರ್ಕಾರ ಸೆ.25ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕೆಂದು ಕೋರಿರುವ ಅರ್ಜಿದಾರರು, ಈ ಅರ್ಜಿ ಇತ್ಯರ್ಥವಾಗುವವರೆಗೆ ನಾಡಗೀತೆಯ ಧಾಟಿ ಹಾಗೂ ಸಮಯ ನಿಗದಿಪಡಿಸಿರುವ ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

ಅರ್ಜಿಯಲ್ಲೇನಿದೆ?
ನಾಡಗೀತೆಗೆ ಮೈಸೂರು ಅನಂತಸ್ವಾಮಿಯವರ ರಾಗ ಸಂಯೋಜನೆ ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ 2013ರ ಜೂ.12ರಂದು ವಸಂತ ಕನಕಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಧಾರಕ್ಕೆ ತದ್ವಿರುದ್ಧವಾಗಿದೆ. ಮೈಸೂರು ಅನಂತಸ್ವಾಮಿಯವರು ಸಂಪೂರ್ಣ ನಾಡಗೀತೆಗೆ ರಾಗ ಸಂಯೋಜನೆ ಮಾಡಿಲ್ಲ ಎಂದು ಆ ಸಭೆಯಲ್ಲಿ ಚರ್ಚಿಸಲಾಗಿತ್ತು. ಜತೆಗೆ, ಡಾ. ಸಿ. ಅಶ್ವಥ್ ಸಂಯೋಜಿಸಿದ್ದ ರಾಗವನ್ನೇ ಮುಂದುವರಿಸುವ ಬಗ್ಗೆ ಸ್ವತಃ ಮೈಸೂರು ಅನಂತಸ್ವಾಮಿಯವರೇ ಒಪ್ಪಿಕೊಂಡಿದ್ದರು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅಶ್ವಥ್ ಅವರ ಸಂಯೋಜನೆಯನ್ನೇ ಮುಂದುವರಿಸುವಂತೆ ನಾಡೋಜ ಚನ್ನವೀರ ಕಣವಿ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸ್ಸನ್ನೂ ಸರ್ಕಾರ ಕಡೆಗಣಿಸಿದೆ. ಅನಂತಸ್ವಾಮಿಯವರು ಸಂಪೂರ್ಣ ನಾಡಗೀತೆಗೆ ರಾಗ ಸಂಯೋಜನೆ ಮಾಡಿರದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ಜಾರಿಗೆ ತರಬೇಕೆಂದರೆ ನಾಡಗೀತೆಯ ಉಳಿದ ಭಾಗಕ್ಕೆ ಮತ್ತೊಬ್ಬರಿಂದ ರಾಗ ಸಂಯೋಜನೆ ಮಾಡಿಸಬೇಕಾಗುತ್ತದೆ. ಇದರಿಂದ, ಮೈಸೂರು ಅನಂತಸ್ವಾಮಿಯವರಿಗೆ ಅಗೌರವ ತೋರಿದಂತಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net