

ಬೆಂಗಳೂರು: ಆರ್ಟಿಓ ಅಧಿಕಾರಿಗಳಿಗೆ, ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಳಗ್ಗೆ 4 ಗಂಟೆ ವೇಳೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ 20ಕ್ಕೂ ಅಧಿಕ ಮಂದಿ ಲೋಕಾಯುಕ್ತ ಅಧಿಕಾರಿಗಳ ತಂಡ ಅತ್ತಿಬೆಲೆ ಆರ್ಟಿಓ ಕಛೇರಿಗೆ ದಾಳಿ ನಡೆಸಿದ್ದಾರೆ.
ಸುಮಾರು 5 ವಾಹನಗಳಲ್ಲಿ ಆಗಮಿಸಿದ ಲೋಕಾಯುಕ್ತ ಪೊಲೀಸರು ಆರ್ಟಿಓ ಕಛೇರಿ ಸಿಬ್ಬಂದಿ ಬಳಿಯಿದ್ದ ಮೊಬೈಲ್ ಮತ್ತು ಪರ್ಸ್ಗಳನ್ನು ವಶಕ್ಕೆ ಪಡೆದು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಪತ್ತೆಯಾದ ಹಣಕ್ಕೆ ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ ಎನ್ನಲಾಗಿದೆ.
ಒಂದೊಂದು ಲಾರಿಗೆ ಹಣ ಫಿಕ್ಸ್
ಅತ್ತಿಬೆಲೆ ಆರ್ಟಿಓ ಕಛೇರಿಯಲ್ಲಿ ಭ್ರಷ್ಟಾಚಾರವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಛೇರಿ ಒಳಗಡೆ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾಗಲೇ, ಹೊರಗಡೆ ಲಾರಿ ಕ್ಲೀನರ್ಸ್ಗಳಿಂದ ಲಂಚ ಪಡೆಯುತ್ತಿದ್ದುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಬೆಂಗಳೂರಿನ ಹೂವಿನ ಮಾರುಕಟ್ಟೆಗೆ ಸಾಗುವ ವಾಹನವೊಂದಕ್ಕೆ ನಿಗಿದಿತ ಮೊತ್ತ ಫಿಕ್ಸ್ ಮಾಡಿರುವ ಆರ್ಟಿಓ ಅಧಿಕಾರಿಗಳು, ಲಂಚ ಪಡೆದು ಕೈಗೆ ಶೀಲ್ ಹಾಕುತ್ತಾರೆ. ವಾಹನವೊಂದಕ್ಕೆ 100 ರೂಪಾಯಿ ಫಿಕ್ಸ್ ಮಾಡಿದ್ದು, ನಿಗದಿತ ಹಣ ನೀಡಿದರೆ ಕೈಗೆ ಶೀಲ್ ಹಾಕುತ್ತಾರೆ. ಶೀಲ್ ಇದ್ದರೆ ಮುಂದೆ ವಾಹನಗಳನ್ನು ಆರ್ಟಿಓ ಅಧಿಕಾರಿಗಳು ಪರಿಶೀಲನೆ ಮಾಡುವುದಿಲ್ಲ ಎಂದು ಹೂ ಸಾಗಾಟ ವಾಹನದ ಕ್ಲೀನರ್ ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ವಾಹನ ಚಾಲಕರ ಬಳಿ ಅಧಿಕಾರಿಗಳ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಧರ್ಮ ಎಂಬ ವ್ಯಕ್ತಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.