ಪೈರಸಿ ಕಾಟ; ಖುಷಿ ಹಂಚುವ ಭರದಲ್ಲಿ ಸಿನಿಮಾದ ಮುಖ್ಯ ದೃಶ್ಯಗಳನ್ನು ಶೇರ್ ಮಾಡಬೇಡಿ ಎಂದ ರಿಷಬ್ ಶೆಟ್ಟಿ

Kanthara
Published on

ಬೆಂಗಳೂರು: ಸಿನಿಮಾ ತಂಡ ಎಷ್ಟೇ ಎಚ್ಚರಿಕೆ ವಹಿಸಿದ್ದರೂ, ಪೈರಸಿ ಕಾಟ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿಂದೆಯೂ ಸಾಕಷ್ಟು ಕನ್ನಡ ಸಿನಿಮಾಗಳಿಗೆ ಪೈರಸಿ ಕಾಟದಿಂದ ತೊಂದರೆಯಾಗಿತ್ತು. ಬಿಡುಗಡೆಯಾದ ಒಂದೆರಡು ದಿನದಲ್ಲೇ ಸಿನಿಮಾ ಪೈರಸಿಯಾಗಿ, ಲಿಂಕ್​ಗಳು ಮೊಬೈಲ್​ನಲ್ಲಿ ಹರಿದಾಡುತ್ತಿತ್ತು. ಇದೀಗ ಎಲ್ಲೆಡೆಯೂ ಹೌಸ್​ಫುಲ್ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾಗೆ ಪೈರಸಿ ಸಮಸ್ಯೆ ಎದುರಾಗಿದೆ.

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ಈಗಾಗಲೇ ಈ ವರ್ಷದ ಹಿಟ್ ಸಿನಿಮಾ ಸಾಲಿಗೆ ಸೇರಿದೆ. ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾದ ಕಾಂತಾರ ಸಿನಿಮಾ ನೋಡಲು ಜನರು ಮುಗಿಬಿದ್ದು, ಚಿತ್ರಮಂದಿರದತ್ತ ಹೋಗುತ್ತಿದ್ದಾರೆ.

ಸಿನಿಮಾ ಚಿತ್ರಮಂದಿರದಲ್ಲಿರುವಾಗಲೇ, ಮೊಬೈಲ್​ಗಳಲ್ಲಿ ಕಾಂತಾರ ಸಿನಿಮಾ ಹರಿದಾಡುತ್ತಿದೆ. ಸಿನಿಮಾವನ್ನು ಲೀಕ್​ ಮಾಡಿರುವ ಪೈರಸಿ ಕಳ್ಳರು, ಕೆಲವು ವೆಬ್​ಸೈಟ್​ಗಳಿಗೆ ಅಪ್ಲೋಡ್ ಮಾಡಿದ್ದಾರೆ. ಸಿನಿಮಾ ತಂಡ ಪೈರಸಿ ತಪ್ಪಿಸಿಕೊಳ್ಳಲು ಸಾಕಷ್ಟು ಮುಂಜಾಗ್ರತ ಕ್ರಮ ವಹಿಸಿಕೊಂಡಿದ್ದರೂ, ಬಿಡುಗಡೆಯಾದ ಎರಡೇ ದಿನಕ್ಕೆ ಕಾಂತಾರ ಸಿನಿಮಾ ಪೈರಸಿಯಾಗಿದೆ.

''ಸಾಕಷ್ಟು ಪ್ರೇಕ್ಷಕರು ಚಿತ್ರಮಂದಿರದಲ್ಲಿ ಮೊಬೈಲ್ ಮೂಲಕ ವಿಡಿಯೋ ಮಾಡುತ್ತಿದ್ದಾರೆ. ಚಿತ್ರಮಂದಿರದವರು ಇತ್ತ ಗಮನ ಹರಿಸಿ ವಿಡಿಯೋ ಮಾಡದಂತೆ ತಡೆಯಿರಿ. ಪೈರಸಿ ವಿಚಾರವಾಗಿ ಸಾಕಷ್ಟು ಕ್ರಮ ವಹಿಸಿಕೊಂಡಿದ್ದೇವೆ. ನಮ್ಮ ಆ್ಯಂಟಿ ಪೈರಸಿ ತಂಡ ಇದಕ್ಕಾಗಿ 24 ಗಂಟೆ ಕೆಲಸ ಮಾಡುತ್ತಿದೆ. ಈಗಾಗಲೇ ಸಾಕಷ್ಟು ಆನ್ಲೈನ್​ ವೆಬ್​ಸೈಟ್, ಯೂಟ್ಯೂಬ್ ಚಾನೆಲ್​ಗಳ ಮೇಲೆ ಕ್ರಮ ವಹಿಸಿದ್ದೇವೆ. ನಿಮ್ಮ ಖುಷಿ ಹಂಚುವ ಭರದಲ್ಲಿ ಸಿನಿಮಾದ ಮುಖ್ಯ ದೃಶ್ಯಗಳನ್ನು ಶೇರ್ ಮಾಡಬೇಡಿ" ಎಂದು ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net