ದೇಶದಲ್ಲಿ ಇಂದು ಅರೆನೆರಳಿನ ಚಂದ್ರಗ್ರಹಣ ಗೋಚರ

Lunar Eclipse F
ಹುಬ್ಬಳ್ಳಿಯಲ್ಲಿ ಗೋಚರಿಸಿದ ಚಂದ್ರಗ್ರಹಣ. (ಚಿತ್ರ: ರಾಜು ಹಿರೇಮಠ)
Published on

ಉಡುಪಿ: ಹುಣ್ಣಿಮೆ ಚಂದ್ರ ಭೂಮಿಯ ಅರೆನೆರಳಲ್ಲಿ ಹಾದುಹೋಗುತ್ತಿರುವುದರಿಂದ ಮೇ 5ರಂದು ದೇಶದಲ್ಲಿ ಅರೆನೆರಳಿನ ಚಂದ್ರಗ್ರಹಣ ಗೋಚರಿಸಿದೆ. ಈ ಗ್ರಹಣ ಭಾರತದ ಎಲ್ಲ ಪ್ರದೇಶಗಳಲ್ಲಿ ರಾತ್ರಿ 8.44ರಿಂದ ಮಧ್ಯರಾತ್ರಿ 1.01ರವರೆಗೆ ನಡೆಯಲಿದೆ. ರಾತ್ರಿ 10.52ಕ್ಕೆ ಗರಿಷ್ಠ ಗ್ರಹಣ ಗೋಚರವಾಗಿದೆ.

ಈ ಗ್ರಹಣ ಭೂಮಿಯ ಅರೆನೆರಳಿನಲ್ಲಿ ಚಂದ್ರನು ಬಂದಾಗ ಸಂಭವಿಸುತ್ತದೆ. ಚಂದ್ರನು ಭೂಮಿಯ ಅರೆನೆರಳಲ್ಲಿ ಹಾದು ಹೋಗುವುದನ್ನು ಅರೆನೆರಳಿನ ಚಂದ್ರಗ್ರಹಣ ಎನ್ನುತ್ತಾರೆ. ಇದೇ ರೀತಿ ಚಂದ್ರನು ಭೂಮಿಯ ನೆರಳಿನಿಂದ ಹಾದುಹೋಗುವಾಗ ಅದು ಪಾರ್ಶ್ವಗ್ರಹಣ ಅಥವಾ ಖಗ್ರಾಸ ಚಂದ್ರಗ್ರಹಣವಾಗಿರುತ್ತದೆ.

ಅರೆನೆರಳಿನ ಚಂದ್ರಗ್ರಹಣವನ್ನು ವೀಕ್ಷಿಸುವುದು ಕಷ್ಟ. ಭೂಮಿಯ ಅರೆನೆರಳು ಮಸುಕಾಗಿರುವುದರಿಂದ ಚಂದ್ರನ ಮೇಲೆ ಈ ನೆರಳನ್ನು ಗಮನಿಸುವುದು ಸುಲಭವಲ್ಲ. ಬರಿಗಣ್ಣಿನಲ್ಲಿ ನೋಡುವಾಗ ಗರಿಷ್ಠ ಗ್ರಹಣದ ಸಮಯ ಚಂದ್ರ, ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ ಸ್ವಲ್ಪ ಕಡಿಮೆ ಪ್ರಕಾಶಮಾನದಿಂದ ಗೋಚರಿಸುತ್ತದೆ. ಭಾರತದ ಎಲ್ಲ ಪ್ರದೇಶಗಳಿಂದ ಈ ಗ್ರಹಣವನ್ನು ನೋಡಬಹುದು. ಅದೇ ರೀತಿ ದಕ್ಷಿಣ ಏಷ್ಯಾದ ಎಲ್ಲ ದೇಶಗಳಲ್ಲಿ, ರಷ್ಯಾ ಹಾಗೂ ಆಸ್ಟ್ರೆಲಿಯಾದಲ್ಲೂ ಈ ಗ್ರಹಣ ಗೋಚರಿಸಿದೆ ಎಂದು ಭೌತಶಾಸ್ತ್ರ ಉಪನ್ಯಾಸಕ ಅತುಲ್​ ಭಟ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net