

ಬೆಂಗಳೂರು: ನೀವು ಆನ್ಲೈನ್ ಆ್ಯಪ್ಗಳನ್ನು ಬಳಸಿ ಸಾಲ ಪಡೆಯುತ್ತೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ. ಇಲ್ಲೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ, ಸಾಲ ಮಾಡಿ ತೀರಿಸಲಾಗದೇ ಸಾವನ್ನು ಅಪ್ಪಿಕೊಂಡಿದ್ದಾನೆ.
ಈ 22ರ ಯುವಕ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ 6ನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದು ಕಾಲೇಜಿಗೆ ಟಾಪರ್ ಕೂಡ ಆಗಿದ್ದ. ಆದರೆ ಈತ ಆನ್ಲೈನ್ ಮೂಲಕ ಲೋನ್ ಪಡಿದಿದ್ದು ಸಾಲ ತೀರಿಸಲು ಸಾಧ್ಯವಾಗದೇ ಪ್ರಾಣವನ್ನೇ ಬಿಟ್ಟಿದ್ದಾನೆ.
ಇದನ್ನೂ ಓದಿ: ಆನ್ಲೈನ್ ಸಾಲಬಾಧೆಯಿಂದ ಯುವಕ ಆತ್ಮಹತ್ಯೆ
ಖಾಸಗಿ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಓದುತ್ತಿರುವ ತೇಜಸ್, ತನ್ನ ಕಾಲೇಜಿಗೆ ಟಾಪರ್ ಆಗಿದ್ದ. ತನ್ನ ಸ್ನೇಹಿತನಿಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದಿದ್ದ. ಆದರೆ ಕಳೆದ ಒಂದು ವರ್ಷದಿಂದ ಸ್ನೇಹಿತ ಇಎಂಐ ಕಟ್ಟಿರಲಿಲ್ಲ. ಆದರೆ ಸಾಲ ಮಾತ್ರ ತೇಜಸ್ ಹೆಸರಲ್ಲಿತ್ತು. ಈ ಹಿನ್ನೆಲೆಯಲ್ಲಿ ಸಾಲ ನೀಡಿದವರು, ಹಣ ಹಿಂತಿರುಗಿಸುವಂತೆ ವಿಪರೀತ ಟಾರ್ಚರ್ ನೀಡುತ್ತಿದ್ದರು.
ಇದರಿಂದಾಗಿ ಮನನೊಂದಿದ್ದ ತೇಜಸ್, ನಿನ್ನೆ ಡೆತ್ ನೋಟ್ ಬರೆದಿಟ್ಟು ಸಂಜೆ ಆರು ಗಂಟೆ ಸುಮಾರಿಗೆ ತನ್ನ ತಾಯಿಯ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಲಾಗಿದ್ದು ಎಚ್ಎಂಟಿ ಕ್ವಾಟ್ರಸ್ನಲ್ಲಿರುವ ಆತನ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಸದ್ಯ ಜಾಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ.
ತೇಜಸ್ ತನ್ನ ಡೆತ್ ನೋಟ್ನಲ್ಲಿ "ಅಮ್ಮ ಅಪ್ಪ ನನ್ನನ್ನು ಕ್ಷಮಿಸಿ.. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ.. ನಾನು ಮಾಡಿರುವ ಸಾಲ ತೀರಿಸಲು ಆಗೋದಿಲ್ಲ ಅದಕ್ಕಾಗಿ ಇದು ನನ್ನ ಕೊನೆಯ ತೀರ್ಮಾನ ..ಥ್ಯಾಂಕ್ಸು ಗುಡ್ ಬಾಯ್.." ಎಂದು ಬರೆದಿದ್ದಾನೆ.