ಆನ್​ಲೈನ್​ ಗೇಮ್​ನಿಂದ 65 ಲಕ್ಷಕ್ಕೂ ಅಧಿಕ ಹಣ ಲಾಸ್: ಬದುಕು ಅಂತ್ಯಗೊಳಿಸಿದ ಶಿರಸಿ ಯುವಕ​​

Sirasi Young Man
Published on

ಉತ್ತರಕನ್ನಡ: ಇತ್ತೀಚಿನ ದಿನಗಳಲ್ಲಿ ಸಾಲದ ಆ್ಯಪ್​ಗಳು​ ಮತ್ತು ರಮ್ಮಿಯಂತಹ ಆನ್​ಲೈನ್​ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್​ಲೈನ್​ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಬಲಿಯಾಗುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕಡಿವಾಣ ಹಾಕದಿದ್ದರೆ, ಇನ್ನುಷ್ಟು ಅಮಾಯಕ ಜೀವಗಳು ಬಲಿಯಾಗುತ್ತವೆ.

ಇದೀಗ ಶಿರಸಿ ತಾಲೂಕಿನ ಕುಳವೆ ಗ್ರಾಮದ ಬಳಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನ್​ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡು ಮನನೊಂದಿದ್ದ ಯುವಕ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ.

ವಿಜೇತ್ ಶಾಂತಾರಾಮ ಹೆಗಡೆ (37) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಬೆಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ನಿನ್ನೆ ಮನೆಯಿಂದ ಹೊರಟಿದ್ದ. ಆದರೆ, ಡೆತ್​ನೋಟ್ ಬರೆದು, ಕುಳವೆ ಗ್ರಾಮದ ಬಳಿ ನೇಣು ಬಿಗಿದುಕೊಂಡು ಸಾವಿನ ಹಾದಿ ಹಿಡಿದಿದ್ದಾನೆ.

ಸುಮಾರು 65 ಲಕ್ಷ ರೂಪಾಯಿಗೂ ಹೆಚ್ಚಿನ ಹಣವನ್ನು ವಿಜಯ್​, ಆನ್‌ಲೈನ್​ ಗೇಮ್‌ನಲ್ಲಿ ಕಳೆದುಕೊಂಡಿದ್ದ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net