

ಬೆಂಗಳೂರು: ಮತ ಚಲಾವಣೆ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಹೊರಬಿದ್ದ ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿವೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ನ ನಾಯಕರು ತಮ್ಮ ತಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುತ್ತವೆ. ನಾವೇ ಅಧಿಕಾರದ ಗದ್ದುಗೆ ಏರುತ್ತೇವೆ ಎಂದು ಹೇಳಿಕೊಂಡು ಬರುತ್ತಿದ್ದಾರೆ.
ಮತದಾನೋತ್ತರ ಸಮೀಕ್ಷೆಯಲ್ಲಿ ಎರಡು ಸಂಸ್ಥೆಗಳು ಬಿಜೆಪಿಗೆ ಬಹುಮತದ ಭವಿಷ್ಯ ನುಡಿದಿವೆ. ಉಳಿದ ಸಮೀಕ್ಷೆಗಳಲ್ಲಿ ಕೆಲವು ಸಂಸ್ಥೆಗಳು ಕಾಂಗ್ರಸ್ಗೆ ಸ್ಪಷ್ಟ ಬಹುಮತ ನೀಡಿದ್ದರೆ, ಹೆಚ್ಚಿನವು ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿವೆ.
ಒಂದು ವೇಳೆ ಈ ಬಾರಿಯೂ ಕಳೆದ ಬಾರಿಯಂತೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಪಕ್ಷದ ಪಾತ್ರ ಪ್ರಮುಖವಾಗುತ್ತದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತೊಮ್ಮೆ ಕಿಂಗ್ ಮೇಕರ್ ಆಗಲಿದೆ ಎಂಬ ಮಾತುಗಳು ರಾಜ್ಯರಾಜಕಾರಣದಲ್ಲಿ ಕೇಳಿ ಬರುತ್ತಿವೆ. ಇದೆಲ್ಲದರೆ ನಡುವೆ ಇದೀಗ ಜೆಡಿಎಸ್ನ ಪ್ರಮುಖ ನಾಯಕರಿಗೆ ತಲೆನೋವಾಗಿರುವುದು ಶಾಸಕರ ಖರೀದಿ ತಂತ್ರಗಾರಿಕೆ!
ಇದೀಗ ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೇಳಿರುವ ಹಿನ್ನೆಲೆ ಜೆಡಿಎಸ್ ನಾಯಕರು ಎಚ್ಚರಿಕೆ ವಹಿಸಿದ್ದಾರೆ. ತಮ್ಮದೇ ಆದ ರಾಜಕೀಯ ತಂತ್ರಗಾರಿಕೆಗಳನ್ನು ಹೆಣೆಯುತ್ತಿದ್ದಾರೆ. ಇದೆಲ್ಲದರ ನಡುವೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಜೆಡಿಎಸ್ ಅಭ್ಯರ್ಥಿಗಳೊಂದಿಗೆ ದೂರವಾಣಿ ಮೂಲಕ ಮಾತುಕಥೆ ನಡೆಸಿದ್ದಾರೆ. ಜತೆಗೆ ಹಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಮತದಾನೋತ್ತರ ಸಮೀಕ್ಷೆಗಳು ಏನೇ ಹೇಳಿದರೂ, ರಾಜ್ಯದ ಜನಾದೇಶ ಏನು ಎಂಬುದು ಶನಿವಾರ(ಮೇ 13)ದಂದು ಬಹಿರಂಗವಾಗಲಿದೆ.