More

    ತಾಯಿಯ ಅಂತ್ಯಸಂಸ್ಕಾರ ಮುಗಿಸಿ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಕಾನ್​ಸ್ಟೆಬಲ್​; ಡಿಜಿ-ಐಜಿಪಿ, ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರ

    ಬೆಂಗಳೂರು: ತಾಯಿ ನಿಧನರಾದ್ದರು ರಜೆ ತೆಗೆದುಕೊಳ್ಳದೇ ಚುನಾವಣಾ ಕೆಲಸಕ್ಕೆ ಹಾಜರಾಗಿದ್ದ ಸಿಬ್ಬಂದಿಯ ಕಾರ್ಯ ವೈಖರಿಗೆ ರಾಜ್ಯ ಪೊಲೀಸ್ ನಿರ್ದೇಶಕ ಪ್ರವೀಣ್ ಸೂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಟ್ವಿಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ನಮ್ಮ ಸಿಬ್ಬಂದಿಯೊಬ್ಬರ ತಾಯಿ ನಿಧನರಾಗಿದ್ದರು. ಅವರಿಗೆ ರಜೆ ತೆಗೆದುಕೊಳ್ಳಿ ಎಂದು ಹೇಳಲಾಗಿತ್ತು. ಆದರೂ, ರಜೆ ತೆಗೆದುಕೊಳ್ಳದೇ ಕರ್ತವ್ಯದಲ್ಲಿ ಮುಂದುವರಿಯುವುದಾಗಿ ಹೇಳಿದರು. ಇದು ನಿಜಕ್ಕೂ ಹೆಮ್ಮೆ ಪಡುವ ವಿಷಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕರ್ತವ್ಯದಲ್ಲಿ ಬದ್ಧತೆ ತೋರಿದ ಪೊಲೀಸ್ ಸಿಬ್ಬಂದಿಯನ್ನು ಸಹೋದ್ಯೋಗಿಗಳು ಸನ್ಮಾನಿಸಿದ ವಿಡಿಯೋವನ್ನು ಸಹ ಶೇರ್ ಮಾಡಿದ್ದಾರೆ.

    ವಿಡಿಯೋ ವೈರಲ್ ಆಗಿತ್ತು

    ಗದಗ್‌ನಲ್ಲಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಕಾನ್ಸ್‌ಟೆಬಲ್ ಅಶೋಕ್ ಗದಗ್ ಅವರನ್ನು ಮಾಧ್ಯಮದವರು ಮಾತನಾಡಿಸಿದ ವೇಳೆ ‘ನನ್ನ ತಾಯಿಗೆ ಹುಷಾರಿರಲಿಲ್ಲ, ಅವರಿಗೆ 80 ವರ್ಷದ ಆಸುಪಾಸು. ಒಂದು ವರ್ಷದ ಹಿಂದೆ ಜಾರಿಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದರು. ಆಪರೇಷನ್ ಮಾಡಿಸಿದರೂ ಕೂಡ ಕಾಲು ಸರಿಯಾಗಿರಲಿಲ್ಲ. ಸ್ಪಲ್ಪ ಉಸಿರಾಟದ ತೊಂದರೆಯಾಗಿ ಬೆಳಗಿನ ಜಾವ ತೀರಿಕೊಂಡರು.

    ಕಾನ್​​ಸ್ಟೇಬಲ್ ಹೇಳಿದ್ದಿಷ್ಟು…

    ”ಇವತ್ತು ಎಲೆಕ್ಷನ್ ಡ್ಯೂಟಿ ಇರುವ ಕಾರಣ ನಾನು ಕೆಲಸಕ್ಕೆ ಬಂದಿದ್ದೇನೆ. ಮನೆಯಲ್ಲಿ ಅಣ್ಣ ಇದ್ದಾನೆ, ಉಳಿದ ಎಲ್ಲ ಕಾರ್ಯಕ್ರಮಗಳನ್ನು ಮನೆಯವರು ನೋಡಿಕೊಳ್ಳುತ್ತಾರೆ. ರಜೆ ಏನು ನಾನು ಕೇಳಲಿಲ್ಲ. ನಮ್ಮನ್ನು ಹೆತ್ತುಹೊತ್ತ ಸಾಕಿದ ತಾಯಿ ಸಾವನ್ನಪ್ಪಿದ್ದಾರೆ. ಈಗ ನಮ್ಮನ್ನು ಸಾಕಿ, ಜೋಪಾನ ಮಾಡುತ್ತಿರುವುದು ಪೊಲೀಸ್ ಇಲಾಖೆ, ಇದು ಸಹ ನಮ್ಮ ತಾಯಿಯೇ. ಇಬ್ಬರೂ ತಾಯಂದಿರು ಒಂದೇ” ಎನ್ನುವ ಮೂಲಕ ಕರ್ತವ್ಯನಿಷ್ಠೆ ತೋರಿದರು. ಈ ವಿಡಿಯೋ ಸಾಮಾಜಿಕ ಜಾಲಜಾಣಗಳಲ್ಲಿ ವೈರಲ್ ಆಗಿತ್ತು. ಸ್ವತಃ ಡಿಜಿಪಿ ಕೂಡ ಆ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.

    ಸಂಸದರಿಂದ ಟ್ವೀಟ್

    ಬೆಂಗಳೂರು ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ. ಮೋಹನ್ ಟ್ವೀಟ್ ಮಾಡಿದ್ದು, ಚುನಾವಣೆ ಸಮಯದಲ್ಲಿ ಸೇವೆ ಸಲ್ಲಿಸಲು ಈ ಪೊಲೀಸ್ ಕಾನ್‌ಸ್ಟೆಬಲ್ ಅವರನ್ನು ನಿಯೋಜಿಸಲಾಗಿತ್ತು. ಚುನಾವಣೆಯ ದಿನ ಬೆಳಿಗ್ಗೆ ಕರ್ತವ್ಯದಲ್ಲಿರುವಾಗ ಅವರ ತಾಯಿಯ ನಿಧನದ ಸುದ್ದಿ ತಿಳಿದಿದೆ. ಆದರೆ ಅವರು ತಮ್ಮ ದುಃಖದ ಹೊರತಾಗಿಯೂ ಕರ್ತವ್ಯ ಪ್ರಜ್ಞೆಯನ್ನು ಗೌರವಿಸಿ ರಜೆ ತೆಗೆದುಕೊಳ್ಳಲು ನಿರಾಕರಿಸಿದರು. ಹ್ಯಾಟ್ಸ್ ಆಫ್ ಎಂದು ಬರೆದುಕೊಂಡಿದ್ದಾರೆ.

    ಸಿಬ್ಬಂದಿಯ ಕೆಲಸದ ಬದ್ಧತೆಗೆ ಡಿಜಿ-ಐಜಿಪಿ ಪ್ರವೀಣ್ ಸೂದ್, ಅಲೋಕ್ ಕುಮಾರ್ ಸೇರಿ ಹಲವು ಅಧಿಕಾರಿಗಳು ಹಾಗೂ ಸಾರ್ವಜನಿಕರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts