More

    ಮತದಾನಕ್ಕೆ ಮತ್ತೆ ನಗರವಾಸಿಗಳ ನಿರಾಸಕ್ತಿ

    ಬೆಂ.ಗ್ರಾಮಾಂತರದಲ್ಲಿ ಶೇ.3.32 ಹೆಚ್ಚಳ ಈ ಬಾರಿಯೂ ಗ್ರಾಮೀಣರೇ ಮುಂದು

    ಗಂಗಾಧರ್ ಬೈರಾಪಟ್ಟಣ ರಾಮನಗರ

    ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಒಟ್ಟಾರೆ ಶೇ.68.30 ಮತದಾನವಾಗಿದ್ದು, ಕಳೆದ ಚುನಾವಣೆಗಿಂತ ಕೊಂಚ ಹೆಚ್ಚಳವಾಗಿದೆಯಾದರೂ, ಕ್ಷೇತ್ರ ವ್ಯಾಪ್ತಿಯ ನಗರದ ಮತದಾರರ ನಿರಾಸಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

    ಹಾಲಿ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆಯಾಗಿದ್ದ ಕ್ಷೇತ್ರದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವ ನಿರೀಕ್ಷೆ ಇತ್ತು. ಅದರಂತೆ ಕಳೆದ ಬಾರಿಗಿಂತ ಉತ್ತಮ ಮತದಾನ ಆಗಿದೆಯಾದರೂ ನಿರೀಕ್ಷೆ ಮೀರಿದ ಮತದಾನ ನಡೆದಿಲ್ಲ. ಪ್ರತಿ ಬಾರಿಯೆಂತೆ ಈ ಬಾರಿಯೂ ಕ್ಷೇತ್ರ ವ್ಯಾಪ್ತಿಯ, ಆನೇಕಲ್, ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ನಿರಾಸಕ್ತಿಯಿಂದ ಮತ ಪ್ರಮಾಣ ನಿರೀಕ್ಷಿತ ದಡ ಸೇರಲಿಲ್ಲ.

    ಕುಣಿಗಲ್ ಉತ್ತಮ

    ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಶೇಕಡಾವಾರು ಮತದಾನದಲ್ಲಿ ಕುಣಿಗಲ್ ಉತ್ತಮ ಸಾಧನೆ ಮಾಡಿದೆ. ಅಂತಿಮ ವರದಿಯಂತೆ ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಶೇ.85.26 ಮತದಾನವಾಗಿದೆ. ನಗರವಾಸಿಗಳು ಮತ್ತು ಅತಿ ಹೆಚ್ಚು ಮತದಾರರನ್ನು ಹೊಂದಿರುವ ರಾಜರಾಜೇಶ್ವರಿ ನಗರ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ.56.06 ಮತ್ತು ಶೇ.56.08 ಮತದಾನವಾಗಿದೆ.

    ಕೈಕೊಟ್ಟ ನಗರವಾಸಿಗಳು

    ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ರಾಜರಾಜೇಶ್ವರಿ ನಗರ, ಆನೇಕಲ್ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿರುವುದು ಈ ಬಾರಿಯೂ ನಗರ ವಾಸಿಗಳು ಮತದಾನದಿಂದ ದೂರ ಉಳಿದಿರುವುದನ್ನು ಬಹಿರಂಗಪಡಿಸಿದೆ. ರಾಜರಾಜೆೇಶ್ವರಿ ನಗರ ಶೇ.56.06, ಆನೇಕಲ್ ಶೇ.60.69 ಮತ್ತು ಬೆಂಗಳೂರು ದಕ್ಷಿಣ ಶೇ.56.08 ಮತದಾನ ಸಾಧಿಸಿದ್ದು, ಇಲ್ಲಿರುವ ಒಟ್ಟು, 16,79,246 ಮತದಾರರ ಪೈಕಿ ಕೇವಲ 9,61168 ಮತದಾರರು ಹಕ್ಕು ಚಲಾಯಿಸಿದ್ದು, ಶೇಕಡವಾರು 57.24 ಮತದಾನವಾಗಿದೆ.

    ಗ್ರಾಮಾಂತರ ಬೆಸ್ಟ್

    ಮತ್ತೊಂದೆಡೆ ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳು ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಉತ್ತಮ ಮತದಾನ ನಡೆದಿದೆ. 11,23,334 ಮತದಾರರಿದ್ದು, 9,52862 ಮಂದಿ ಹಕ್ಕು ಚಲಾಯಿಸಿದ್ದಾರೆ. ಮತದಾನ ಪ್ರಮಾಣ ಕುಸಿತ ತಡೆಯುವಲ್ಲಿ ಗ್ರಾಮೀಣ ಮತದಾರರು ಯಶಸ್ವಿಯಾಗಿದ್ದಾರೆ. ಇಲ್ಲಿನ ಶೇಕಡವಾರು 84.82 ಮತದಾನವಾಗಿದೆ.

    ನೀರಿನಲ್ಲಿ ಹೋಮ

    ಮತದಾನ ಪ್ರಮಾಣ ಹೆಚ್ಚಳ ಮಾಡಬೇಕು ಎನ್ನುವ ಕಾರಣಕ್ಕಾಗಿಯೇ ಜಿಲ್ಲಾ ಸ್ವೀಪ್ ಸಮಿತಿ ವ್ಯಾಪಕ ಪ್ರಚಾರ ಮತ್ತು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿತ್ತು. ರಾಮನಗರ ಜಿಲ್ಲೆಯಲ್ಲಿಯೂ ನೂರಾರು ರ‌್ಯಾಲಿ, ಜಾಥಾ ಸೇರಿ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಮತದಾನ ಅಗತ್ಯದ ಬಗ್ಗೆ ತಿಳಿವಳಿಕೆ ಮೂಡಿಸುವ ಜತೆಗೆ ಕೊಂಚಮಟ್ಟಿನ ಯಶಸ್ವಿಯೂ ಆಯಿತು. ಆದರೆ, ನಗರ ಪ್ರದೇಶದ ಮತದಾರರು ಕೈ ಕೊಟ್ಟ ಕಾರಣ, ಇಡೀ ಸ್ವೀಪ್ ಸಮಿತಿ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

    ಮತದಾನದ ಪ್ರಮಾಣ 2019
    ವಿಧಾನಸಭೆ ಮತದಾರರು ಚಲಾವಣೆ ಶೇಕಡ
    ಕುಣಿಗಲ್ 190913 147193 77.10
    ಆರ್‌ಆರ್‌ನಗರ 450928 241934 53.65
    ಬೆಂ.ದಕ್ಷಿಣ 617011 327617 53.10
    ಆನೇಕಲ್ 363818 212170 58.32
    ಮಾಗಡಿ 225293 175999 78.14
    ರಾಮನಗರ 209855 162265 77.32
    ಕನಕಪುರ 221152 181831 88.22
    ಚನ್ನಪಟ್ಟಣ 218225 171431 78.56
    ಒಟ್ಟು 2497141 1620440 64.89

    ಮತದಾನದ ಪ್ರಮಾಣ 2024

    ವಿಧಾನಸಭೆ ಮತದಾರರು ಚಲಾವಣೆ ಶೇಕಡ
    ಕುಣಿಗಲ್ 203228 173275 85.26
    ಆರ್‌ಆರ್‌ನಗರ 504617 282885 56.06
    ಬೆಂ.ದಕ್ಷಿಣ 750785 421071 56.08
    ಆನೇಕಲ್ 423844 257212 60.69
    ಮಾಗಡಿ 236483 200914 84.96
    ರಾಮನಗರ 221098 186966 84.56
    ಕನಕಪುರ 231262 196037 84.77
    ಚನ್ನಪಟ್ಟಣ 231263 195670 84.61
    ಒಟ್ಟು 2802580 1914030 68.30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts