ನೇಪಾಳ ಮತ್ತೆ ಖ್ಯಾತೆ.. 100ರೂಪಾಯಿ ನೋಟಿನಲ್ಲಿ ಭಾರತದ ಭೂಪ್ರದೇಶ!

nepal
Published on

ಕಠ್ಮಂಡು: ತನ್ನ ನಕ್ಷೆಯಲ್ಲಿ ಭಾರತದ ಭೂಪ್ರದೇಶಗಳನ್ನು ತೋರಿಸುವುದರ ಜೊತೆಗೆ, ನೋಟಿನ ಮೇಲೆ ಹೊಸ ನಕ್ಷೆಯನ್ನು ಮುದ್ರಿಸಲು ನೇಪಾಳ ಸರ್ಕಾರ ನಿರ್ಧರಿಸಿದೆ. ಆ ಮೂಲಕ ಮತ್ತೊಮ್ಮೆ ನೆರೆ ರಾಷ್ಟ್ರ ಖ್ಯಾತೆ ತೆಗೆದಿದೆ.

ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೇಪಾಳದ 100 ನೇಪಾಳ ರೂಪಾಯಿ ನೋಟಿನ ಮೇಲೆ ಹಳೆಯ ನಕ್ಷೆ ಬದಲಾಯಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ನೇಪಾಳವು 4 ವರ್ಷದ ಹಿಂದೆ ತನ್ನ ರಾಜಕೀಯ ನಕ್ಷೆಯಲ್ಲಿ ಈ ಮೂರು ಪ್ರದೇಶಗಳನ್ನು ಸೇರಿಸಿತು. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಈಗಾಗಲೇ ಹಲವು ವಿಚಾರಗಳಲ್ಲಿ ಭಾರತದ ವಿರುದ್ಧ ನಿರ್ಧಾರಗಳನ್ನು ಕೈಗೊಂಡಿರುವ ನೇಪಾಳ ತನ್ನ ಇತ್ತೀಚಿನ ನಿರ್ಧಾರದಿಂದ ಮತ್ತೆ ಭಾರತದೊಂದಿಗೆ ಸಂಬಂಧ ಹದಗೆಡುವ ಪ್ರಯತ್ನ ಮಾಡುತ್ತಿದೆ. ಹೊಸ ನಕ್ಷೆಯಲ್ಲಿ ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಲಾಪಾನಿ ಒಳಗೊಂಡಿರುತ್ತದೆ. ಈ ಮೂರು ಪ್ರದೇಶಗಳು ಈಗ ಭಾರತದ ಉತ್ತರಾಖಂಡದ ಭಾಗವಾಗಿವೆ.

ನೇಪಾಳವು 1997 ರಿಂದ ಈ ಮೂರು ಪ್ರದೇಶಗಳನ್ನು ತನ್ನದೇ ಎಂದು ಹೇಳಿಕೊಳ್ಳುತ್ತಿದೆ. ಪ್ರಧಾನಿ ಪ್ರಚಂಡ ನೇತೃತ್ವದಲ್ಲಿ 2024ರ ಏಪ್ರಿಲ್ 25 ಮತ್ತು ಮೇ 2 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 100 ರೂಪಾಯಿ ನೋಟಿನ ಮೇಲೆ ಹಳೆಯ ನಕ್ಷೆಯನ್ನು ಬದಲಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಮತ್ತು ಸಂವಹನ ಸಚಿವೆ ರೇಖಾ ಶರ್ಮಾ ತಿಳಿಸಿದ್ದಾರೆ.

2020 ರ ಜೂನ್ 18 ರಂದು ನೇಪಾಳವು ತನ್ನ ರಾಜಕೀಯ ನಕ್ಷೆಗೆ ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಲಾಪಾನಿ ಪ್ರದೇಶಗಳನ್ನು ಸೇರಿಸಿತು.

ನೇಪಾಳವು ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದೊಂದಿಗೆ ಗಡಿಗಳನ್ನು ಹೊಂದಿದೆ. ಭಾರತವು ಪ್ರಸ್ತುತ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಮೇಲೆ ಹಕ್ಕುಗಳನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net