ಭೀಕರ ಅಪಘಾತ, ಕೆಎಸ್​ಆರ್​ಟಿಸಿಗೆ ಒಟ್ಟು ಮೂವರು ಬಲಿ: 7 ವರ್ಷದ ಬಾಲಕ, ಆತನ ಅಪ್ಪ, 17 ವರ್ಷದ ಅಂಗವಿಕಲೆ ಸ್ಥಳದಲ್ಲೇ ಸಾವು

Untitled-1
ರಾಯಚೂರಿನಲ್ಲಿ ಅಪ್ಪ-ಮಗನ ಸಾವಿಗೆ ಕಾರಣವಾದ ಕೆಎಸ್​ಆರ್​ಟಿಸಿ ಬಸ್
Published on

ರಾಯಚೂರು/ಮೈಸೂರು: ಭೀಕರ ಅಪಘಾತವೊಂದು ಸೇರಿ ಎರಡು ಕೆಎಸ್​ಆರ್​ಟಿಸಿ ಬಸ್​ಗಳಿಗೆ ಒಟ್ಟು ಮೂವರು ಬಲಿಯಾಗಿದ್ದಾರೆ. ಪರಿಣಾಮವಾಗಿ ಒಂದು ಅಪಘಾತದಲ್ಲಿ 7 ವರ್ಷದ ಬಾಲಕ, ಆತನ ಅಪ್ಪ ಇನ್ನೊಂದು ಅಪಘಾತದಲ್ಲಿ 17 ವರ್ಷದ ಅಂಗವಿಕಲೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಎರಡು ಅಪಘಾತದಲ್ಲಿ ಒಂದು ರಾಯಚೂರಿನಲ್ಲಿ ಮತ್ತೊಂದು ಮೈಸೂರಿನಲ್ಲಿ ಸಂಭವಿಸಿದೆ.

ರಾಯಚೂರಿನ ಗಬ್ಬೂರ್ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಅಲ್ಲಿನ ಅತ್ತನೂರು ಗ್ರಾಮದ ನಿವಾಸಿ ವಿಜಯಾನಂದ (28) ಹಾಗೂ ಅವರ ಪುತ್ರ ಮಲ್ಲಿಕಾರ್ಜುನ (7) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯಾನಂದ ಅವರು ಮಗನನ್ನು ಬೈಕ್​ನಲ್ಲಿ ಕೂರಿಸಿಕೊಂಡು ರಾಯಚೂರಿನಿಂದ ಅತ್ತನೂರು ಕಡೆಗೆ ಹೋಗುತ್ತಿದ್ದಾಗ, ಕೆಎಸ್​ಆರ್​ಟಿಸಿ ಬಸ್​ ಬೈಕ್​ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ತಂದೆ-ಮಗ ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಕ್ಕೆ ಕಾರಣವಾದ ಕೆಎಸ್​ಆರ್​ಟಿಸಿ ಬಸ್​ ಚಾಲಕನನ್ನು ರಾಯಚೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೈಸೂರಿನಲ್ಲಿ ನಡೆದ ಇನ್ನೊಂದು ಅಪಘಾತದಲ್ಲಿ ಕೆಎಸ್​ಆರ್​ಟಿಸಿ ಬಸ್​ಗೆ ಅಂಗವಿಕಲ ಯುವತಿ ಬಲಿಯಾಗಿದ್ದಾಳೆ. ನಂಜನಗೂಡು ತಾಲೂಕಿನ ಹುಸ್ಕೂರು ಗ್ರಾಮದ ಮಹೇಶ ಎಂಬುವರ ಪುತ್ರಿ ಚಂದನಾ (17) ಸಾವಿಗೀಡಾದ ಯುವತಿ.

ಈಕೆ ನಂಜನಗೂಡು ತಾಲೂಕಿನ ವಳಗೆರೆ ಗ್ರಾಮದಿಂದ ಸ್ವಗ್ರಾಮ ಹುಸ್ಕೂರಿಗೆ ತೆರಳುತ್ತಿದ್ದು, ಬಸ್​ನಿಂದ ಇಳಿಯುತ್ತಿರುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಸಾವಿಗೀಡಾಗಿದ್ದಾರೆ. ಅದಾಗ್ಯೂ ಚಾಲಕ ಬಸ್​ ನಿಲ್ಲಿಸದೆ ಮುಂದಕ್ಕೆ ಹೋಗಿದ್ದು, ಗ್ರಾಮಸ್ಥರು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಸಮೀಪದ ಹಲ್ಲರೆ ಗ್ರಾಮಸ್ಥರಿಗೆ ದೂರವಾಣಿ ಕರೆ ಮಾಡಿ ಬಸ್​ಗೆ ತಡೆಯೊಡಿದ್ದಾರೆ. ಹುಸ್ಕೂರು ಗ್ರಾಮಸ್ಥರು ಮತ್ತು ನೊಂದ ಕುಟುಂಬಸ್ಥರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದ್ದು, ಸ್ಥಳಕ್ಕೆ ನಂಜನಗೂಡು ಸಂಚಾರ ಠಾಣೆ ಎಎಸ್ಐ ವೆಂಕಟಾಚಲ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net