ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

Premature
Published on

ಅಮೆರಿಕ: ಸಾಮಾನ್ಯವಾಗಿ ಎಲ್ಲರೂ ಹುಟ್ಟಿದ ಬಳಿಕ ದಾಖಲೆ ಮಾಡುತ್ತಾರೆ. ಆದರೆ ಇಲ್ಲೊಬ್ಬನ ಹುಟ್ಟೇ ದಾಖಲೆ ಅನಿಸಿಕೊಂಡಿದೆ. ಅದೂ ಗಿನ್ನೆಸ್​ ವರ್ಲ್ಡ್ ರೆಕಾರ್ಡ್​. ಅಚ್ಚರಿಯ ಸಂಗತಿ ಎಂದರೆ ತಾಯಿಯ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

ಜನ್ಮತಃ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಮಾಡಿರುವ ಈತನ ಹೆಸರು ಕರ್ಟಿಸ್​ ಜಿ ಕೀಥ್​ ಮೀನ್ಸ್ ಅಂತ. ಈತ ಅವಧಿಪೂರ್ವ ಜೀವಂತ ಶಿಶುಗಳ ಪೈಕಿ ಜಗತ್ತಿನಲ್ಲೇ ಅತಿ ಕಿರಿಯವ. ಅಂದರೆ ಇವನು 21 ವಾರ ಒಂದು ದಿನಕ್ಕೆ ಅರ್ಥಾತ್ 148ನೇ ದಿನಕ್ಕೇ ಜನಿಸಿದ್ದಾನೆ. ತಿಂಗಳುಗಳ ಪ್ರಕಾರ 4.93 ತಿಂಗಳಿಗೆ ಹುಟ್ಟಿದ್ದಾನೆ.

2020ರ ಜುಲೈ 5ರಂದು ಜನಿಸಿದ್ದ ಈತನನ್ನು ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಗಿದ್ದು, ಈ ವರ್ಷದ ಏಪ್ರಿಲ್​ನಲ್ಲಿ ಮನೆಗೆ ಕಳುಹಿಸಿಕೊಡಲಾಗಿದೆ. ಅಮೆರಿಕದ ಅಲಬಾಮದಲ್ಲಿ ಜನಿಸಿರುವ ಈತ ಹುಟ್ಟುವಾಗ ಇದ್ದ ತೂಕ ಬರೀ 420 ಗ್ರಾಮ್. ಈತನ ಹೃದಯ ಹಾಗೂ ಶ್ವಾಸಕೋಶಕ್ಕೆ ಹೊರಗಿನಿಂದ ಉಪಕರಣ ಅಳವಡಿಸಿ ಉಸಿರಾಟ ಸ್ಥಗಿತಗೊಳ್ಳದಂತೆ ಚಿಕಿತ್ಸೆ ನೀಡಲಾಗಿತ್ತು.

ಈತನ ತಾಯಿ ಮಿಷೆಲ್ಲೆ ಶೆಲ್ಲಿ ಬಟ್ಲರ್​ 2020ರ ಜುಲೈ 4ರಂದು ಹೆರಿಗೆ ನೋವಿಗೆ ಒಳಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಆಕೆಯನ್ನು ಬರ್ಮಿಂಗ್​​ಹ್ಯಾಮ್​ನ ಯುನಿವರ್ಸಿಟಿ ಆಫ್​ ಅಲಬಾಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಲೆಕ್ಕಾಚಾರದ ಪ್ರಕಾರ ಆತ ಇಂದು ಅಂದರೆ ನ. 11ರಂದು ಜನಿಸಬೇಕಿತ್ತು.

ರೀಜನಲ್​ ನಿಯೋನೇಟಲ್​ ಇಂಟೆನ್ಸಿವ್ ಕೇರ್ ಯುನಿಟ್​​ನಲ್ಲಿ 275 ದಿನಗಳ ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆದ ಬಳಿಕ ಈ ಮಗುವನ್ನು ಇದೇ ಏಪ್ರಿಲ್​ 6ರಂದು ಮನೆಗೆ ಕಳುಹಿಸಿಕೊಡಲಾಗಿತ್ತು. ಅವಧಿಪೂರ್ವ ಜೀವಂತ ಶಿಶುಗಳ ಪೈಕಿ ಈತ ಜಗತ್ತಿನಲ್ಲೇ ಅತಿ ಕಿರಿಯವನಾಗಿದ್ದು, ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ಗೆ ಭಾಜನನಾಗಿದ್ದಾನೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net