ಕಾರು-ಟ್ರ್ಯಾಕ್ಟರ್ ಭೀಕರ ಅಪಘಾತ: ತಾಯಿ, ಮಗ, 6 ವರ್ಷದ ಮೊಮ್ಮಗು ಸ್ಥಳದಲ್ಲೇ ಸಾವು, ಇನ್ನೊಬ್ಬಾಕೆಯ ಸ್ಥಿತಿ ಚಿಂತಾಜನಕ...

Tractor
Published on

ಗದಗ: ಕಾರು ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ, ಮಗ ಹಾಗೂ ಮೊಮ್ಮಗಳು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನೊಬ್ಬರು ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.

ಹುಬ್ಬಳ್ಳಿಯ ಶಿವಾನಂದಯ್ಯ ಶಿವಲಿಂಗಯ್ಯ ಹಿರೇಮಠ (45), ಅನಸೂಯಾ ಶಿವಲಿಂಗಯ್ಯ ಹಿರೇಮಠ (65), ನಮಸ್ವಿ ಶಿವಾನಂದಯ್ಯ ಹಿರೇಮಠ (6) ಮೃತ ದುರ್ದೈವಿಗಳು. ಗಿರಿಜಾ ಶಿವಾನಂದಯ್ಯ ಹಿರೇಮಠ ಹಾಗೂ ಕಾರು ಚಾಲಕ ಸಂತೋಷ ಬಸವರಾಜ ರಾವಳ್​ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್​ ಚಾಲಕ ಪರಾರಿಯಾಗಿದ್ದಾನೆ.

ವಿಆರ್​ಎಲ್​ ಸಿಬ್ಬಂದಿಯಾಗಿರುವ ಶಿವಾನಂದಯ್ಯ ಹಿರೇಮಠ ಹಾಗೂ ಕುಟುಂಬ ಸದಸ್ಯರೊಂದಿಗೆ ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದೇವರ ದರ್ಶನಕ್ಕಾಗಿ ತೆರಳಿದ್ದರು. ದರ್ಶನ ಪಡೆದುಕೊಂಡು ಮರಳಿ ಮುಂಡರಗಿ ಕಡೆಯಿಂದ ಗದಗ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟಿದ್ದರು. ಡಂಬಳ ಸಮೀಪದಲ್ಲಿ ಮುಂದೆ ಹೊರಟಿದ್ದ ಟ್ರ್ಯಾಕ್ಟರ್​ನ ಟ್ರೇಲರ್​ಗೆ ಕಾರು ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಡರಗಿ ಠಾಣೆ ಸಿಪಿಐ ಸುನೀಲ್​ ಸವದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತಾಪ: ಶಿವಾನಂದಯ್ಯ, ಗಿರಿಜಾ ಹಾಗೂ ನಮಸ್ವಿ ನಿಧನಕ್ಕೆ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ.ವಿಜಯ ಸಂಕೇಶ್ವರ, ಎಂಡಿ ಆನಂದ ಸಂಕೇಶ್ವರ ಅವರು ತೀವ್ರ ಕಂಬನಿ ಮಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net