

ಬೆಂಗಳೂರು: ಸ್ನಾನಕ್ಕೆಂದು ಹೋಗಿದ್ದ ಯುವತಿ ಪ್ರಾಣ ಕಳೆದುಕೊಂಡ ಪ್ರಕರಣವೊಂದು ಇಂದು ನಡೆದಿದ್ದು, ತಮ್ಮ ಪುತ್ರಿಯ ಸಾವಿಗೆ ಸಂಬಂಧಿಸಿದಂತೆ ಆಕೆಯ ಪಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಉತ್ತರ ತಾಲ್ಲೂಕು ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿಯ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಈ ಪ್ರಕರಣ ನಡೆದಿದೆ. ಮೂಲತಃ ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ಅರಕೆರೆ ಗ್ರಾಮದ ಕವಿತಾ (22) ಮೃತಪಟ್ಟ ಯುವತಿ.
ಈಕೆ ಇಂದು ಗ್ಯಾಸ್ ಗೀಸರ್ ಆನ್ ಮಾಡಿಕೊಂಡು ಸ್ನಾನ ಮಾಡಲು ತೆರಳಿದ್ದು, ಎಷ್ಟು ಹೊತ್ತಾದರೂ ಹೊರಗೆ ಬರದಿದ್ದಾಗ ಪತಿ ಕಿಟಕಿಯಲ್ಲಿ ಇಣುಕಿ ನೋಡಿದಾಗ ಪತ್ನಿ ನೆಲದಲ್ಲಿ ಎಚ್ಚರ ತಪ್ಪಿ ಬಿದ್ದಿರುವುದು ಕಂಡು ಬಂದಿತ್ತು. ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕವಿತಾ ಪೋಷಕರು ಮಗಳು ಕವಿತಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಕೂಲಂಕಷವಾಗಿ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಮಾದನಾಯಕನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಕವಿತಾಗೆ ನಾಲ್ಕು ವರ್ಷಗಳ ಹಿಂದೆ ಪ್ರದೀಪ್ ಜತೆ ವಿವಾಹ ಮಾಡಿಸಲಾಗಿದ್ದು, ದಂಪತಿಗೆ 3 ವರ್ಷದ ಮಗಳಿದ್ದಾಳೆ. ಗಂಡ-ಹೆಂಡತಿ ಮಧ್ಯೆ ಆಗಾಗ ಜಗಳ ಆಗುತ್ತಿತ್ತು ಎಂಬ ಆರೋಪವೂ ಇದ್ದು, ತನಿಖೆ ನಡೆಯುತ್ತಿದೆ.