

ಬೆಂಗಳೂರು: ಸ್ನಾನ ಮಾಡಲೆಂದು ಹೋಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ. ಇಪ್ಪತ್ತಮೂರು ವರ್ಷ ವಯಸ್ಸಿನ ಸಂಪದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಆಗಿದ್ದು, ದುರಂತಕ್ಕೀಡಾಗಿದ್ದಾಳೆ. ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯ ಮನೆಯೊಂದರ ಸ್ನಾನದ ಕೋಣೆಯಲ್ಲಿ ಈ ಅವಘಡ ಸಂಭವಿಸಿದೆ.
ಕೆಲವು ದಿನಗಳ ಹಿಂದೆಯೇ ಈ ಅನಾಹುತ ಸಂಭವಿಸಿದ್ದರೂ ತಡವಾಗಿ ಬಹಿರಂಗಗೊಂಡಿದೆ. ಅಂದರೆ ಆಗಸ್ಟ್ 4ರಂದು ಮಧ್ಯಾಹ್ನ 12.30ರ ಸುಮಾರಿಗೆ ಸಂಪದ ಸ್ನಾನಕ್ಕೆಂದು ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಎರಡು ಗಂಟೆ ಕಳೆದರೂ ಆಕೆ ಸ್ನಾನದ ಕೋಣೆಯಿಂದ ಹೊರಬರದಿದ್ದಾಗ ಚಿಂತಿತರಾದ ಮನೆಯವರು ಬಾತ್ರೂಮ್ ಬಾಗಿಲು ಮುರಿದು ಒಳಗೆ ನೋಡಿದ್ದಾರೆ. ಸ್ನಾನ ಮಾಡುತ್ತಿದ್ದ ಸಂಪದ ಕುಸಿದು ಬಿದ್ದಿದ್ದಳು.
ಎಚ್ಚರ ತಪ್ಪಿ ಕುಸಿದು ಬಿದ್ದಿದ್ದ ಸಂಪದಳನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಳು. ಸ್ನಾನದ ಸಂದರ್ಭ ಗೀಸರ್ನಿಂದ ಕಾರ್ಬನ್ ಮೋನಾಕ್ಸೈಡ್ ಸೋರಿಕೆ ಆಗಿದ್ದು, ಅದರಿಂದಾಗಿ ಆಕೆ ಉಸಿರುಗಟ್ಟಿ ಸಾವಿಗೀಡಾಗಿದ್ದಾಳೆ ಎಂಬುದು ವೈದ್ಯಕೀಯ ಪರೀಕ್ಷೆ ವೇಳೆ ತಿಳಿದುಬಂದಿದೆ. ಮಹಾಲಕ್ಷ್ಮೀ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.