

ಮುಂಬೈ: ಎಲ್ಲಿಯ ಕ್ರಿಕೆಟ್ ದೇವರು, ಎಲ್ಲಿಯ ಒಂದು ಸಾಮಾನ್ಯ ನಾಯಿ!
ಹೌದು.. ಕ್ರಿಕೆಟ್ ಗಾಡ್ ಎಂದೇ ಕರೆಯಲ್ಪಡುವ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ ಗಮನವನ್ನು ಒಂದು ನಾಯಿ ಸೆಳೆದಿದೆ. ಆ ಮೂಲಕ 'ಎವೆರಿ ಡಾಗ್ ಹ್ಯಾಸ್ ಇಟ್ಸ್ ಡೇ' ಎಂಬ ಆಂಗ್ಲ ಗಾದೆಮಾತು ನಾಯಿಯೊಂದರ ಪಾಲಿಗೆ ಅಕ್ಷರಶಃ ನಿಜವಾಗಿದೆ.
ಗೆಳೆಯರಿಂದ ಬಂದ ಒಂದು ವಿಡಿಯೋ ಕ್ಲಿಪ್ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಸಚಿನ್ ತೆಂಡುಲ್ಕರ್, ಅದರಲ್ಲಿನ ನಾಯಿಯೊಂದರ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅವರು ಆ ನಾಯಿಯ ಕ್ಯಾಚಿಂಗ್ ಸ್ಕಿಲ್ಗೆ ಮಾರುಹೋಗಿ, ಆ ಬಗ್ಗೆ ತಮ್ಮ ಫಾಲೋವರ್ಸ್ ಬಳಿ ತಮಗಿನಿಸಿದ್ದನ್ನು ಹೇಳಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಇಬ್ಬರು ಮಕ್ಕಳು ಕ್ರಿಕೆಟ್ ಆಡುತ್ತಿದ್ದು, ಅವರೊಂದಿಗೆ ನಾಯಿ ಕೂಡ ಪಾಲ್ಗೊಂಡಿದ್ದು, ಅದು ಕೀಪರ್ ಜಾಗದಲ್ಲಿ ನಿಂತು ಕೀಪಿಂಗ್ ಮಾಡುತ್ತಿದೆ. ಮಾತ್ರವಲ್ಲ, ಬ್ಯಾಟ್ ತಪ್ಪಿ ಬಂದ ಚೆಂಡನ್ನು ಚೆನ್ನಾಗಿ ಕ್ಯಾಚ್ ಹಿಡಿದಿದೆ. ಅಷ್ಟು ಮಾತ್ರವಲ್ಲ, ಬ್ಯಾಟಿಂಗ್ ಮಾಡುತ್ತಿದ್ದು ಬಾಲಕಿ ಹೊಡೆದ ಚೆಂಡನ್ನು ಫೀಲ್ಡರ್ ಥರ ಓಡಿ ಹೋಗಿ ಎತ್ತಿಕೊಂಡು ಕೂಡ ಬಂದಿದೆ.
ನಾಯಿಯ ಈ ಕೌಶಲವನ್ನು ಕಂಡು ಮನಸೋತಿರುವ ಸಚಿನ್ ತೆಂಡುಲ್ಕರ್, ನಾವು ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ಸ್, ಫೀಲ್ಡರ್ಸ್ ಹಾಗೂ ಆಲ್ ರೌಂಡರ್ಗಳನ್ನೂ ನೋಡಿದ್ದೇವೆ. ಆದರೆ ಇದಕ್ಕೆ ಏನೆಂದು ಹೆಸರಿಡೋಣ ಎಂದು ನಾಯಿಯ ಕುರಿತು ಬೆರಗನ್ನು ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ ಹೀಗೆ ನಾಯಿಯೊಂದು ಕ್ರಿಕೆಟ್ನಲ್ಲಿ ಪಾಲ್ಗೊಂಡಿರುವ ಈ ಸಣ್ಣ ವಿಡಿಯೋ ಕ್ಲಿಪ್ ಅವರು ಪೋಸ್ಟ್ ಮಾಡಿ ಇನ್ನೂ 24 ಗಂಟೆಗಳಾಗಿಲ್ಲ, ಅಷ್ಟರಲ್ಲೇ 66 ಸಾವಿರಕ್ಕೂ ಅಧಿಕ ಮಂದಿ ಇದನ್ನು ಲೈಕ್ ಮಾಡಿದ್ದಾರೆ, ಒಟ್ಟು 9 ಸಾವಿರಕ್ಕೂ ಅಧಿಕ ಮಂದಿ ರಿ-ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಈಗಾಗಲೇ 8.3 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಇದು ಕಂಡಿದೆ.