ಡಿ.ಜೆಹಳ್ಳಿ ಗಲಭೆ: ಬಂಧಿತನ ತಂದೆ ಹೃದಯಾಘಾತದಿಂದ ಸಾವು

DJ Halli
Published on

ಬೆಂಗಳೂರು: ಪೈಗಂಬರ್‌ ವಿರುದ್ಧ ಹಾಕಿರುವ ಪೋಸ್ಟ್‌ ಒಂದನ್ನು ನೆಪಮಾಡಿಕೊಂಡು ಕೆಲ ಕಿಡಿಗೇಡಿಗಳು ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ಸೃಷ್ಟಿಸಿರುವ ಗಲಭೆ ಪ್ರಕರಣ ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಲೇ ಸಾಗಿದೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳ ಪೈಕಿ ಫರ್ಹಾನ್‌ ಎಂಬ ಯುವಕ ಕೂಡ ಒಬ್ಬ. ಈತನನ್ನು ನಿನ್ನೆ ಅಂದರೆ ಗುರುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಲಭೆ ಪ್ರಕರಣದಲ್ಲಿ ಈತನ ಕೈವಾಡವೂ ಇರುವ ಶಂಕೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಇತರ ಕೆಲವರ ಜತೆ ಫರ್ಹಾನ್‌ ಕೂಡ ಬಂಧಿತನಾಗಿದ್ದಾನೆ. ಈತ ಡಿಜೆ ಹಳ್ಳಿಯ ಕುಬ್ಬ ಮಸೀದಿ ರಸ್ತೆಯ ನಿವಾಸಿ.

ಮಗನ ಬಂಧನದ ಸುದ್ದಿ ಕೇಳಿ ಆತನ ತಂದೆಗೆ ಹೃದಯಾಘಾತವಾಗಿದ್ದು ಇಂದು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

ತಂದೆ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮಗನಿಗೆ ಅವಕಾಶ ನೀಡಿದ್ದಾರೆ.

ತಂದೆಯ ಅಂತ್ಯ ಸಂಸ್ಕಾರಕ್ಕೆ ತೆರಳಲು ಆರೋಪಿ ಫರ್ಹಾನ್‍ಗೆ ಅವಕಾಶ ಕಲ್ಪಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಗಲಭೆಗೆ ಸಂಬಂಧಿಸಿದಂತೆ ಇದುವರೆಗೂ 151 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮುಜಾಮಿಲ್‍ನನ್ನು ಐದು ದಿನ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಕರೊನಾ ಪರೀಕ್ಷೆಗೆ ಒಳಪಟ್ಟ 40 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೂವರಿಗೆ ಕರೊನಾ ಬಂದಿದೆ. ಉಳಿದ ಆರೋಪಿಗಳ ಟೆಸ್ಟ್ ವರದಿ ಬಂದ ಬಳಿಕ ಕೋರ್ಟ್‍ಗೆ ಹಾಜರುಪಡಿಸಲಾಗುತ್ತದೆ. ತನಿಖೆ ಹಂತದಲ್ಲಿ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವೇ ಮಾಹಿತಿ ನೀಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net