

ಬೆಂಗಳೂರು: ಬಸವನಗುಡಿಯ ಶ್ರೀನಗರ ವಾರ್ಡ್ನಲ್ಲಿ ಕಳಪೆ ಕಾಮಗಾರಿಯಿಂದ ಇಡೀ ರಸ್ತೆಯೇ ಕುಸಿದಿದೆ. ಇದು ಡಬಲ್ ಇಂಜಿನ್ ಜೋಡಿಯ ಡಬಲ್ ಧೋಖಾ ಎಂದು ಕಾಂಗ್ರೆಸ್ ವಕ್ತಾರ ಡಾ.ಶಂಕರ ಗುಹಾ ಆರೋಪಿಸಿದ್ದಾರೆ.
ಬಸವನಗುಡಿಯಲ್ಲಿ ಇತ್ತೀಚೆಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಒಂದೇ ಸಮನೆ ಎಲ್ಲೆಂದರಲ್ಲಿ ಅವಸರ ಅವಸರವಾಗಿ ಬೀದಿಗಳನ್ನು ಸಿಂಗರಿಸುವ ಕಾರ್ಯ ನಡೆದಿತ್ತು. ಅಂದರೆ ಅತಿ ವೇಗವಾಗಿ ರಸ್ತೆಗಳಿಗೆ ಟಾರ್ಗಳ ಹೊದಿಕೆಗಳನ್ನು ಮಾಡಿ ಮೇಕಪ್ ಬಳಿದಂತೆ ತೋರುತ್ತಿತ್ತು. ಇದಾದ ಕೆಲವು ದಿನಗಳ ಬಳಿಕ ರಸ್ತೆಗಳಲ್ಲಿ ಇದ್ದಕ್ಕಿದ್ದಂತೆ ಗುಂಡಿಗಳು ಪ್ರತ್ಯಕ್ಷವಾಗುತ್ತಿದ್ದವು. ರಸ್ತೆಗಳು ಕಿತ್ತು ಬರುತ್ತಿದ್ದವು. ಈ ಹಿನ್ನೆಲೆ ಡಾ.ಶಂಕರ್ ಗುಹಾ ಈ ಕುರಿತು ಜಾಗೃತಿ ಮೂಡಿಸಲು ಮತ್ತು ಬಿಬಿಎಂಪಿ ಅಧಿಕಾರಿಗಳ ಗಮನವನ್ನು ಸೆಳೆಯಲು ಬಸವನಗುಡಿಯ ನಾನಾ ಭಾಗಗಳಲ್ಲಿ ರಸ್ತೆಯ ಗುಂಡಿಗಳಿದ್ದಲ್ಲಿಗೆ ಹೋಗಿ ಆ ಕುರಿತು ಧ್ವನಿ ಎತ್ತಿದ್ದರು.
ಈ ವೇಳೆ ಬಿಬಿಎಂಪಿ ಕಡೆಯಿಂದ ತಾತ್ಕಾಲಿಕವಾಗಿ ಒಂದಿಷ್ಟು ಮಿಕ್ಸ್ ಅನ್ನು ತುಂಬಿ ಹೋಗುತ್ತಿದ್ದರು. ಇದಕ್ಕೆ ಶಾಸಕ ರವಿ ಸುಬ್ರಮಣ್ಯ ಅವರು "ಬಸವನಗುಡಿಯ ಅಭಿವೃದ್ಧಿಯನ್ನು ಸಹಿಸಿದವರು ವೃಥಾ ಆರೋಪ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದರು. ಇದೀಗ ಬಸವನಗುಡಿಯ ಶ್ರೀನಗರದ ಬನಶಂಕರಿಯ ಒಂದನೇ ಹಂತದ 14ನೇ ಮುಖ್ಯರಸ್ತೆಯ ಇಡೀ ರಸ್ತೆಗೆ ರಸ್ತೆಯೇ ಕುಸಿದಿದೆ. ಸುಮಾರು ಒಂದೂವರೆ ಅಡಿಯಷ್ಟು ಆಳಕ್ಕೆ ರಸ್ತೆ ಕುಸಿದಿದೆ.
ರಸ್ತೆ ನಿರ್ಮಾಣದ ಸಂದರ್ಭದಲ್ಲಿ ರೋಲರ್ ಮುಖಾಂತರ ರಸ್ತೆಯಲ್ಲಿ ಹಾಕಿದ ಜಲ್ಲಿಯನ್ನು ಸಮತಟ್ಟು ಮಾಡದೆ ಮೇಲಿಂದ ಮೇಲೆ ಹೊದಿಕೆಯಷ್ಟೇ ಮಾಡಿದ್ದಾರೆ. ಬಸವನಗುಡಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಚಿಕ್ಕಪ್ಪ ಶಾಸಕ ರವಿಸುಬ್ರಹ್ಮಣ್ಯ ಅವರ ಡಬಲ್ ಇಂಜಿನ್ ಜೋಡಿ ತಮ್ಮ ಅಧಿಕಾರ ಅವಧಿಯಲ್ಲಿ ಚುನಾವಣೆಗೂ ಮುನ್ನ ಅನೇಕ ರೀತಿಯಲ್ಲಿ ಜನರಿಗೆ ಡಬಲ್ ತೊಂದರೆ ನೀಡಿದ್ದಾರೆ ಎಂದು ಡಾ. ಶಂಕರ ಗುಹಾ ಕಿಡಿಕಾರಿದ್ದಾರೆ.
ಈ ಮೊದಲು ರಸ್ತೆ ಕಾಮಗಾರಿಗಾಗಿ ಸರ್ಕಾರದ ಬೊಕ್ಕಸದಿಂದ ಹಣ ಖರ್ಚು ಮಾಡಲಾಗಿದೆ. ಆದರೆ ನಿರ್ಮಾಣವಾದ ರಸ್ತೆಗಳಲ್ಲಿ ಗುಂಡಿಗಳು ಬೀಳುತ್ತಿವೆ, ರಸ್ತೆಯ ಮೇಲ್ಪದರ ಕಿತ್ತು ಬರುತ್ತಿದೆ. ರಸ್ತೆಗೆ ರಸ್ತೆಯೇ ಕುಸಿಯುತ್ತಿದೆ. ಹೀಗೆ ಕಮಿಷನ್ ಆಸಿಗಾಗಿ ನಡೆದ ಕಾಮಗಾರಿಯಿಂದಾಗಿ ಹೊಸದಾಗಿ ಮಾಡಿದ ಎಲ್ಲಾ ರಸ್ತೆಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಇದೀಗ ಬಿದ್ದಿರುವ ಒಂದೇ ಮಳೆಗೆ ಎಲ್ಲೆಂದರಲ್ಲಿ ಅನೇಕ ರೀತಿಯ ಅವಾಂತರಗಳು ಸೃಷ್ಟಿಯಾಗಿದ್ದು ಅದಕ್ಕೆ ರಿಪೇರಿ ಮತ್ತು ತೇಪೆ ಮಾಡಲು ಮತ್ತೆ ಇನ್ನೊಂದಿಷ್ಟು ಹಣಗಳನ್ನು ಖರ್ಚು ಮಾಡಲಾಗುತ್ತಿದೆ. ಇದು ಜನರ ಶ್ರಮದ ಹಣ, ಅವರ ತೆರಿಗೆಯ ಹಣ ಈ ರೀತಿಯಲ್ಲಿ ಪೋಲಾಗುತ್ತಿರುವುದು ಸರಿಯೇ? ಮುಂಬರುವ ಮಳೆಗಾಲದಲ್ಲಿ ಜನರಿಗೆ ಈ ರೀತಿಯ ಅನೇಕ ಸಮಸ್ಯೆಗಳು ಎದುರಾಗಲಿದೆ. ಇದು ಡಬಲ್ ಇಂಜಿನ್ ಸರ್ಕಾರ ಮತ್ತು ಡಬಲ್ ಇಂಜಿನ್ ಅಪ್ಪ ಮಗ ಜೋಡಿಯ ಡಬಲ್ ದೋಖಾ ಎಂದು ಶಂಕರ್ ಗುಹಾ ದೂರಿದ್ದಾರೆ.