ಇನ್​ಫೊಸಿಸ್​ ನಾರಾಯಣಮೂರ್ತಿ ಅವರ ಆ ಮಾತು 'ವಾರಕ್ಕೆ 70 ಗಂಟೆಗಳ ಕೆಲಸದ ನಡುವೆ' ಕಳೆದುಹೋಯ್ತಾ?

Narayana murthy Infosys
Published on

ಬೆಂಗಳೂರು: ಭಾರತದ ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಸಲ ಮಾಡಬೇಕು ಎಂದು ದಿಗ್ಗಜ ಸಾಫ್ಟ್​ವೇರ್ ಕಂಪನಿಗಳ ಪೈಕಿ ಮುಂಚೂಣಿ ಸಂಸ್ಥೆ ಆಗಿರುವ ಇನ್​ಫೊಸಿಸ್​ನ ನಾರಾಯಣಮೂರ್ತಿ ಅವರು ಹೇಳಿದ್ದ ಮಾತುಗಳು ನಿನ್ನೆಯಿಂದ ಭಾರಿ ಸದ್ದು ಮಾಡುತ್ತಿವೆ.

ಭಾರತದ ವರ್ಕ್ ಕಲ್ಚರ್​ ಬದಲಾಗಬೇಕು, ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದ ಮಾತುಗಳಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಇವತ್ತಿಡೀ ಈ ವಿಷಯ ಚರ್ಚೆಯಲ್ಲಿದ್ದು, ಬಹುತೇಕ ಎಲ್ಲೆಡೆ ಟಾಪ್ ಟ್ರೆಂಡಿಂಗ್​ನಲ್ಲೂ ಇತ್ತು.

ಕಳೆದ ಎರಡು ಮೂರು ದಶಕಗಳಲ್ಲಿ ಆರ್ಥಿಕವಾಗಿ ಗಣನೀಯ ಪ್ರಗತಿ ಕಂಡ ರಾಷ್ಟ್ರಗಳ ಜತೆ ಭಾರತ ಪೈಪೋಟಿ ನಡೆಸಬೇಕಾದರೆ ಭಾರತದ ವರ್ಕ್ ಕಲ್ಚರ್ ಬದಲಾಗಬೇಕು. ಇಲ್ಲಿನ ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳುವುದರ ಜತೆಗೆ ಅವರು ಇನ್ನೊಂದು ಪ್ರಮುಖ ವಿಷಯವನ್ನು ಅದೇ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದರು.

ಆದರೆ 'ವಾರಕ್ಕೆ 70 ಗಂಟೆಗಳ ಕೆಲಸದ ನಡುವೆ' ಆ ಮಾತು ಕಳೆದುಹೋಯ್ತೇನೋ ಎಂಬಂತಾಗಿದೆ. ಅರ್ಥಾತ್, ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ವಿಷಯ ಚರ್ಚೆಯಾದಷ್ಟೂ ಆ ಇನ್ನೊಂದು ಗಂಭೀರ ಸಂಗತಿಯ ಬಗ್ಗೆ ಅಷ್ಟೇನೂ ಚರ್ಚೆ ಆಗಿಲ್ಲ.

ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ವಿಷಯದ ಜೊತೆಗೇ ಅವರು ದೇಶವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದರು. ಸರ್ಕಾರ ಹಾಗೂ ಅಧಿಕಾರಿಗಳ ಭ್ರಷ್ಟಾಚಾರ ಪ್ರಗತಿಗೆ ತಡೆಯೊಡ್ಡುತ್ತಿದೆ ಎಂಬುದನ್ನೂ ನಾರಾಯಣಮೂರ್ತಿ ಹೇಳಿದ್ದರು. ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಸ್ವಲ್ಪಮಟ್ಟಿಗಾದರೂ ತಗ್ಗಿಸದಿದ್ದರೆ ನಾವು ತೀರ ಮುಂದುವರಿದ ರಾಷ್ಟ್ರಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಿಲ್ಲ ಎಂದಿದ್ದರು. ಆದರೆ ವಾರಕ್ಕೆ 70 ಗಂಟೆಗಳ ಕೆಲಸದ ವಿಚಾರಕ್ಕೆ ಸಿಕ್ಕಷ್ಟು ಪ್ರಾಧಾನ್ಯತೆ ಆ ವಿಷಯಕ್ಕೆ ಸಿಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net