ಬೆಂಗಳೂರಿನಲ್ಲಿ ಕೆಲವೇ ಸೆಕೆಂಡುಗಳಲ್ಲಿ ನಡೆಯಿತು ಕೋಟಿ ರೂ. ದರೋಡೆ!

ROBEBRY
Published on

ಬೆಂಗಳೂರು: ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುವನ್ನು ಕದಿಯಲು ಎಷ್ಟು ಹೊತ್ತು ಬೇಕಾಗಬಹುದು? ಸೆಕೆಂಡುಗಳಲ್ಲಂತೂ ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವುದೇ. ಆದರೆ ಈ ಪ್ರಕರಣದಲ್ಲಿ ಕ್ಷಣ ಮಾತ್ರದಲ್ಲೇ ಕಳ್ಳರು ಕೋಟಿ ರೂ. ಗೂ ಅಧಿಕ ಮೌಲ್ಯವಿರುವ ಸ್ವತ್ತನ್ನು ದೋಚಿದ್ದಾರೆ.

ನಿನ್ನೆ ರಾತ್ರಿ, ಕೆ.ಆರ್‍ ಮಾರ್ಕೆಟ್‍ ಫ್ಲೈ ಓವರ್‍ ಮೇಲೆ ಸಿನಿಮೀಯ ಶೈಲಿಯಲ್ಲಿ ಕಳ್ಳತನ ನಡೆದಿದೆ. ವ್ಯಾಪಾರಿ ಒಬ್ಬರು, ರಾತ್ರಿ ವೇಳೆ ತಮ್ಮ  ಸ್ಕೂಟರ್‍ನಲ್ಲಿ ಸುಮಾರು 3.5 ಕೆ.ಜಿ ಚಿನ್ನವನ್ನು ಸಾಗಿಸುತ್ತಿದ್ದರು. ಅವರು ಕೆ.ಆರ್‍ ಮಾರ್ಕೆಟ್‍ ಫ್ಲೈ ಓವರ್‍ ಮೇಲೆ ಪ್ರಯಾಣಿಸುತ್ತಿದ್ದಾಗ, ಹಿಂದಿನಿಂದ ಮತ್ತೊಂದು ಬೈಕ್‍ನಲ್ಲಿ ಬಂದ ಕಳ್ಳರ ತಂಡ ಇವರ ವಾಹನವನ್ನು ಅಡ್ಡಗಟ್ಟಿದ್ದಾರೆ. ನಂತರ ಸ್ಕೂಟರ್‍ನಲ್ಲಿದ್ದ ಚಿನ್ನದ ಚೀಲವನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.

ಒಟ್ಟಿನಲ್ಲಿ ಕೆಲವೇ ಸೆಕಂಡುಗಳಲ್ಲಿ ಏನಾಗುತ್ತಿದೆ ಎನ್ನುವುದರ ಸ್ಪಷ್ಟ ಚಿತ್ರಣ ಸಿಗುವುದರ ಒಳಗಾಗಿ ಈ ಕಳ್ಳರು ಕೃತ್ಯ ನಡೆಸಿ ಪರಾರಿಯಾಗಿದ್ದಾರೆ. ಕಳೆದುಕೊಂಡ ಚಿನ್ನದ ಮೌಲ್ಯ ಸುಮಾರು 1 ಕೋಟಿ 70 ಲಕ್ಷ ರೂ.ಗೂ ಅಧಿಕ ಎನ್ನಲಾಗಿದೆ.

ಘಟನೆ ನಡೆದ ತಕ್ಷಣ, ಈ ವ್ಯಾಪಾರಿ ನೇರವಾಗಿ ಕಾಟನ್ ಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಕಳ್ಳರು ಹೊಂಚು ಹೇಗೆ ಹಾಕಿದ್ದರು ಎಂದರೆ, ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಕೂಡ ಇಲ್ಲ. ಹೀಗಾಗಿ ಕಳ್ಳರ ಪತ್ತೆ ಕಠಿಣವಾಗಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆ ಶುರು ಮಾಡಿದ್ದು ಹಲವಾರು ಅನುಮಾನಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net