ಮತ್ತೆ ದೇವರಾದ ಸೋನು: ಭಾರತೀಯ ವಿದ್ಯಾರ್ಥಿಗಳಿಗೆ ಬಸ್, ಟ್ಯಾಕ್ಸಿ, ವಿಮಾನ ವ್ಯವಸ್ಥೆ! ವಿಡಿಯೋಗಳು ವೈರಲ್...

Published on
ಕರೊನಾ ಲಾಕ್‌ಡೌನ್ ಆದ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಸಾವಿರ ಸಾವಿರ ಮಂದಿಗೆ ಸಹಾಯ ಮಾಡಿರುವುದು ಎಲ್ಲರೂ ನೋಡಿದ್ದಾರೆ. ತಮ್ಮದೇ ದುಡ್ಡಿನಲ್ಲಿ ಬಡವರ್ಗದವರು, ಕೂಲಿಕಾರ್ಮಿಕರನ್ನು ತಮ್ಮ ಊರುಗಳಿಗೆ ಸೇರಿಸುವ ಜವಾಬ್ದಾರಿ ಹೊತ್ತರು. ಕರೊನಾ ನಂತರವೂ ನಟ ಜನರಿಗೆ ತಮ್ಮ ಹಲವು ಕೆಲಸಗಳ ಮೂಲಕ ಸಹಾಯ ಮಾಡುತ್ತಲೆ ಬಂದಿದ್ದಾರೆ. ಇದೀಗ, ನಟ ಸೋನು ಸೂದ್ ಅವರು ರಷ್ಯಾ ದೇಶ ಪ್ರಾರಂಭಿಸಿರುವ ದಾಳಿಯ ಮಧ್ಯೆ ಯೂಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಕೂಡಾ ಸಹಾಯ ಮಾಡುತ್ತಿದ್ದಾರೆ.
ಹೌದು, ಹಲವು ವರದಿಗಳ ಪ್ರಕಾರ, ಯೂಕ್ರೇನ್‌ನಲ್ಲಿ ಯುದ್ಧ ಪೀಡಿತ ಪ್ರದೇಶಗಳನ್ನು ತೊರೆದು ಸುರಕ್ಷಿತ ಸ್ಥಳಗಳನ್ನು ತಲುಪಲು ಹಲವಾರು ಭಾರತೀಯ ವಿದ್ಯಾರ್ಥಿಗಳಿಗೆ ನಟ ಸೋನು ಸೂದ್ ಸಹಾಯ ಮಾಡುತ್ತಿದ್ದಾರೆ. ಹರ್ಷ ಎಂಬ ಭಾರತೀಯ ವಿದ್ಯಾರ್ಥಿ ''ತಾನು ಮತ್ತು ತನ್ನ ಸ್ನೇಹಿತರು ಕೀವ್‌ನಲ್ಲಿ ಸಿಲುಕಿಕೊಂಡಿದ್ದಾಗ ಸೋನು ಸೂದ್ ಅವರ ತಂಡ ತಮಗೆ ಸಹಾಯ ಮಾಡಿದೆ'', ಅಂತ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿ ನಟನಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಇನ್ನು, ಯೂಕ್ರೇನ್​ನಲ್ಲಿನ ಕೀವ್​ನಿಂದ ಎಲ್ವಿವ್‌ಗೆ ತೆರಳಲು ಸೋನು ಸೂದ್ ಅವರ ತಂಡವು ತನಗೂ ಸಹಾಯ ಮಾಡಿದೆ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಜತೆಗೆ, ಯೂಕ್ರೇನ್​ನ ಎಲ್ವಿವ್​ನಿಂದ ಆಕೆ ಪೋಲೆಂಡ್ ದೇಶದ ಗಡಿಯನ್ನು ತಲುಪಿರುವುದಾಗಿ ಕೂಡಾ ಹೇಳಿಕೊಂಡಿದ್ದಾರೆ. ಯೂಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ನಟ ಸೋನು ಅವರ ತಂಡವನ್ನು ಸೇರಿಕೊಂಡ ತಕ್ಷಣ, ಅಲ್ಲಿನ ಸ್ಥಳೀಯ ಟ್ಯಾಕ್ಸಿಗಳನ್ನು ಬಳಸಿ ರೈಲ್ವೆ ನಿಲ್ದಾಣಗಳನ್ನು ವಿದ್ಯಾರ್ಥಿಗಳು ತಲುಪಲು ಸಹಾಯ ಮಾಡಲಾಗುತ್ತಿದೆ.
ಜತೆಗೆ, ವಿದ್ಯಾರ್ಥಿಗಳನ್ನು ಪೋಲಿಷ್ ಗಡಿಗೆ ಸಾಗಿಸಲು ಬಸ್‌ಗಳ ವ್ಯವಸ್ಥೆ ಕೂಡಾ ಸೋನು ಅವರ ತಂಡಗಳಿಂದ ನಡೆಯುತ್ತಿದೆ. ಟಿಕೆಟ್ ದರವನ್ನು ಭರಿಸಲಾಗದ ವಿದ್ಯಾರ್ಥಿಗಳಿಗೆ ವಿಮಾನದ ಟಿಕೆಟ್ ದರವನ್ನು ಪಾವತಿಸಿ, ಸುರಕ್ಷಿತವಾಗಿ ಭಾರತವನ್ನು ತಲುಪಲು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈಗ, ಯೂಕ್ರೇನ್​ನಲ್ಲಿ ಸಿಲುಕಿ ಸೋನು ಸಹಾಯ ಪಡೆದಿರುವ ಅನೇಕ ಭಾರತೀಯ ವಿದ್ಯಾರ್ಥಿಗಳು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳ ಮೂಲಕ ಧನ್ಯವಾದ ತಿಳಿಸುತ್ತಿದ್ದು, ಆ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net