ಹೌದು, ಅಪ್ಪು ಸರಳತೆಯನ್ನು ಕಿರೀಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಕೊಂಡಾಡಿದ್ದಾರೆ. ಪುನೀತ್ ಅವರನ್ನು ಬಾಲ್ಯದಲ್ಲೊಮ್ಮೆ ಭೇಟಿಯಾದ ಕ್ಷಣ ಹಾಗೂ ಜಾಕಿ ರಿಲೀಸ್ ಸಂದರ್ಭದಲ್ಲಿ ಭೇಟಿಯಾದ ಎರಡು ಘಟನೆಗಳನ್ನು ನೆನಪಿಸಿಕೊಂಡು ಒಂದು ಭಾವನಾತ್ಮಕ ಪೋಸ್ಟ್ ವೊಂದನ್ನು ಮಾಡಿದ್ದಾರೆ ಕಿರೀಟಿ. ''ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸ 10 ವರ್ಷಗಳದ್ದು . ಆದರೂ ಆ ನೆನಪುಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. 2010ರಲ್ಲಿ ಜಾಕಿ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ನಾನು ಅಪ್ಪು ಸರ್ ಅವರನ್ನು ಮೊದಲ ಸಲ ಭೇಟಿಯಾದೆ. ಅವರ ಡ್ಯಾನ್ಸ್, ಆ್ಯಕ್ಷನ್, ಸ್ಕ್ರೀನ್ ಪ್ರೆಸೆನ್ಸ್ ನೋಡಿ ಅಚ್ಚರಿಗೊಂಡಿದ್ದೆ. ಆದರೆ, ಅವರು ಆಫ್ ಸ್ಕ್ರೀನ್ ನಲ್ಲಿದ್ದ ರೀತಿ ಮನಸಿಗೆ ಹತ್ತಿರವಾಯಿತು. ನಾವು ಥಿಯೇಟರ್‌ನಿಂದ ನನ್ನ ಮನೆಗೆ ಹೋಗುತ್ತಿದ್ದಾಗ, ಮಳೆ ಬೀಳುತ್ತಿತ್ತು ಮತ್ತು ಪುನೀತ್ ಸರ್ ಅವರೆ ನಮ್ಮಿಬ್ಬರಿಗೂ ಕೊಡೆ ಹಿಡಿದರು. ನೃತ್ಯದ ಬಗ್ಗೆ ಮತ್ತು ಅವರ ಆಕ್ಷನ್ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು. ಚಿಕ್ಕ ಹುಡುಗನಿಗೆ ಕೊಡೆ ಹಿಡಿದ ಸೂಪರ್‌ಸ್ಟಾರ್. ನಮ್ಮ ಕನಸಿನಲ್ಲಿಯೂ ಊಹಿಸಲಾಗದ ಸಂಗತಿ. ಅದು ಪುನೀತ್ ಸರ್ ಅವರಿಂದ ಮಾತ್ರ ಸಾಧ್ಯ. ಆ ದಿನ ನಾನು ಸರಳತೆಯ ಮೌಲ್ಯವನ್ನು ಅರಿತೆ. ಇದು ಅಪ್ಪು ಸರ್ ಅವರಿಂದ ನಾನು ಅತ್ಯಮೂಲ್ಯವಾದ ಪಾಠ'', ಎಂದು ಭಾವುಕರಾಗಿದ್ದಾರೆ ಕಿರೀಟಿ.