China Uses Donkeys : ಕತ್ತೆಗಳು ಸಾಕು ಪ್ರಾಣಿಗಳು ಎಂಬುದು ನಿಮಗೆಲ್ಲ ಗೊತ್ತೇ ಇದೆ. ದುಡಿಯುವುದರಲ್ಲಿ ಕತ್ತೆಗಳು ಸದಾ ಮುಂದು. ದುಡಿದರೆ ಕತ್ತೆಯಂತೆ ದುಡಿಯಬೇಕು ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ. ಕತ್ತೆ ತುಂಬಾ ಭಾರವನ್ನು ಸಹ ಹೊರಬಲ್ಲವು. ಪ್ರಾಚೀನ ಕಾಲದಿಂದಲೂ, ಮಾನವರು ಅನೇಕ ಉದ್ದೇಶಗಳಿಗಾಗಿ ಕತ್ತೆಗಳನ್ನು ಬಳಸಿದ್ದಾರೆ. ಹೀಗೇಕೆ ಈ ಕತ್ತೆಯ ವಿಚಾರ ಅಂದರೆ, ಚೀನಾದವರಿಗೆ ಕತ್ತೆಗಳು ತುಂಬಾನೇ ಅವಶ್ಯಕವಾಗಿದೆ. ಕತ್ತೆಯು ಸಾಂಪ್ರದಾಯಿಕ ಔಷಧದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಕತ್ತೆಗಳ ದೇಹದಿಂದ ಬರುವ ಜೆಲಾಟಿನ್ ಎಂಬ ಜೆಲ್ ತರಹದ ವಸ್ತುವು ಚೀನಿಯರು ಸುಂದರವಾಗಿರಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ಚೀನಾಕ್ಕೆ ಪಾಕಿಸ್ತಾನದ ನೆರವು
ಕತ್ತೆಗಳ ವಿಷಯದಲ್ಲಿ ಚೀನಾದ ವ್ಯಾಪಾರ ಪಾಲುದಾರ ಪಾಕಿಸ್ತಾನ ನೆರವಿಗೆ ಬಂದಿದೆ. ಚೀನಾ ಒಂದು ಕಾಲದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಕತ್ತೆಗಳ ಜನಸಂಖ್ಯೆಯನ್ನು ಹೊಂದಿತ್ತು. ಸೌಂದರ್ಯವರ್ಧಕಗಳಿಗಾಗಿ ಕತ್ತೆಗಳ ನಿರಂತರ ಹತ್ಯೆಯಿಂದಾಗಿ, ಕತ್ತೆಗಳ ಸಂಖ್ಯೆ ಸದ್ಯ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಸಹಜವಾಗಿಯೇ ಅಲ್ಲಿ ಬೇಡಿಕೆ ಹೆಚ್ಚಾಗಿದೆ. ಇಥಿಯೋಪಿಯಾ, ಚಾಡ್ ಮತ್ತು ಸುಡಾನ್‌ನ ಆಫ್ರಿಕನ್ ದೇಶಗಳ ಜೊತೆಗೆ ಪಾಕಿಸ್ತಾನವು ವಿಶ್ವದಲ್ಲೇ ಅತಿ ಹೆಚ್ಚು ಕತ್ತೆಗಳನ್ನು ಹೊಂದಿರುವ ದೇಶವಾಗಿದೆ. ಇಥಿಯೋಪಿಯಾ 9.93 ಮಿಲಿಯನ್ ಕತ್ತೆಗಳನ್ನು ಹೊಂದಿದೆ, ಚಾಡ್ 3.71 ಮಿಲಿಯನ್, ಸುಡಾನ್ 7.65 ಮಿಲಿಯನ್ ಮತ್ತು ಪಾಕಿಸ್ತಾನ 5.72 ಮಿಲಿಯನ್ ಕತ್ತೆಗಳನ್ನು ಹೊಂದಿದೆ.
ಚೀನಾದಲ್ಲಿ ಶೇ. 80 ರಷ್ಟು ಇಳಿಕೆ
90ರ ದಶಕದ ಆರಂಭದಲ್ಲಿ, ಚೀನಾದಲ್ಲಿ 11 ಮಿಲಿಯನ್ ಕತ್ತೆಗಳಿದ್ದವು. ತಮ್ಮ ಸಾಂಪ್ರದಾಯಿಕ ಆಹಾರವಾದ ಎಜಿಯಾವೊಗಾಗಿ ಕತ್ತೆಗಳನ್ನು ವ್ಯಾಪಕವಾಗಿ ವಧೆ ಮಾಡಲು ಪ್ರಾರಂಭಿಸಿದರು. ಇದರ ಪರಿಣಾಮವಾಗಿ 2024ರ ಹೊತ್ತಿಗೆ, ಕತ್ತೆಗಳ ಸಂಖ್ಯೆ 2 ಮಿಲಿಯನ್‌ಗೆ ಕುಗ್ಗಿತು. 80 ಪ್ರತಿಶತ ಇಳಿಕೆ ಕಂಡಿತು. ಆದರೆ, ಚೀನಾದಲ್ಲಿ ಎಜಿಯಾವೊಗೆ ಮಾತ್ರ ಬೇಡಿಕೆ ಕಡಿಮೆಯಾಗಿಲ್ಲ. ಇದಕ್ಕಾಗಿಯೇ ಚೀನಾ ಪಾಕಿಸ್ತಾನದಿಂದ ಕತ್ತೆಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
ಎಜಿಯಾವೊ ಎಂದರೇನು?
ಎಜಿಯಾವೊ ಎಂಬುದು ಚೀನಿಯರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ನಂಬುವ ವಸ್ತುವಾಗಿದೆ. ಚೀನಾವನ್ನು ಆಳಿದ ಕೊನೆಯ ರಾಜವಂಶವಾದ ಕ್ವಿಂಗ್ ರಾಜವಂಶದ ಅವಧಿಯಲ್ಲಿ ಇದನ್ನು ಚೀನಾದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಎಜಿಯಾವೊ, ಚಕ್ರವರ್ತಿಗಳು ಮತ್ತು ಅವರ ಸಂಬಂಧಿಕರು ರಕ್ತವನ್ನು ಶುದ್ಧೀಕರಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಬಳಸುತ್ತಿದ್ದ ಐಷಾರಾಮಿ ವಸ್ತುವಾಗಿತ್ತು.
ಅನುಕೂಲಗಳು
ಇದು ಕತ್ತೆಯ ಚರ್ಮದಿಂದ ಸಂಸ್ಕರಿಸಿದ ಜೆಲಾಟಿನ್ ಆಗಿದೆ. ಇಜಿಯಾವೊ ಲೈಂಗಿಕ ಆರೋಗ್ಯಕ್ಕೂ ಉತ್ತಮವಾಗಿದೆ. ಇದು ವಿಶೇಷವಾಗಿ ಮಹಿಳೆಯರಿಗೆ ಒಳ್ಳೆಯದು ಎಂದು ಹೇಳಲಾಗಿದೆ. ಇಜಿಯಾವೊ ಮುಟ್ಟಿನ ಸಮಸ್ಯೆಗಳು, ಹಾರ್ಮೋನುಗಳ ಬದಲಾವಣೆಗಳು ಮತ್ತು ಹೆಚ್ಚಿನ ಲೈಂಗಿಕ ಬಯಕೆಗೆ ಪರಿಣಾಮಕಾರಿ ಎಂದು ನಂಬಲಾಗಿದೆ. ಇದನ್ನು ಈಗ ಚೀನಾದಲ್ಲಿ ಎಲ್ಲರೂ ವ್ಯಾಪಕವಾಗಿ ಬಳಸುತ್ತಿದ್ದಾರೆ. ರಕ್ತ ಪರಿಚಲನೆ ಸಮಸ್ಯೆಗಳು ಮತ್ತು ರಕ್ತಹೀನತೆಗೆ ಚಿಕಿತ್ಸೆ ನೀಡಲು ಚೀನಿಯರು ಆಹಾರದೊಂದಿಗೆ ಎಜಿಯಾವೊವನ್ನು ಬೆರೆಸುತ್ತಾರೆ. ಜೆಲಾಟಿನ್ ಪಡೆಯಲು ಚೀನಾದಲ್ಲಿ ಕಡಿಮೆ ಅವಧಿಯಲ್ಲಿ ಎರಡು ಲಕ್ಷ ಕತ್ತೆಗಳನ್ನು ಕೊಲ್ಲಲಾಯಿತು. ಚೀನಾದ ಮಧ್ಯಮ ವರ್ಗವು ಇದರಲ್ಲಿ ಬಹಳ ಆಸಕ್ತಿಯನ್ನು ಹೊಂದಿದೆ.
ಪಾಕಿಸ್ತಾನಕ್ಕೆ ಸಹಾಯ
2022ರಿಂದ ರಾಜಕೀಯ ಅಸ್ಥಿರತೆ ಮತ್ತು ಕುಸಿದ ಆರ್ಥಿಕತೆಯೊಂದಿಗೆ ಹೋರಾಡುತ್ತಿರುವ ಪಾಕಿಸ್ತಾನಕ್ಕೆ, ತನ್ನ ಯುವಕರಿಗೆ ಆದಾಯವನ್ನು ಗಳಿಸುವ ಮತ್ತು ಉದ್ಯೋಗವನ್ನು ಒದಗಿಸುವ ಹೊಸ ಉದ್ಯಮದ ತೀವ್ರ ಅಗತ್ಯವಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನಿಗಳು ಚೀನಾದ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದರು. ಪಾಕಿಸ್ತಾನವು ಬಂದರು ನಗರವಾದ ಗ್ವಾದರ್ ಬಳಿ ಬೃಹತ್ ಕಸಾಯಿಖಾನೆಯನ್ನು ತೆರೆದಿದ್ದು, ಕತ್ತೆಗಳನ್ನು ರಫ್ತು ಮಾಡುತ್ತಿದೆ.
ಪಾಕಿಸ್ತಾನದಲ್ಲಿ ಇಂತಹ ಕಸಾಯಿಖಾನೆಗಳು ಮತ್ತು ಉತ್ತಮ ತಳಿಯ ಕತ್ತೆ ಸಾಕಣೆ ಕೇಂದ್ರಗಳಿಗಾಗಿ ಚೀನಾದ ಕಂಪನಿಗಳು ಕೋಟಿಗಟ್ಟಲೆ ಹೂಡಿಕೆ ಮಾಡಲು ಸಿದ್ಧವಾಗಿವೆ. ಪಾಕಿಸ್ತಾನದಂತೆಯೇ ಹೆಚ್ಚಿನ ಕತ್ತೆಗಳ ಜನಸಂಖ್ಯೆಯನ್ನು ಹೊಂದಿರುವ ಅಫ್ಘಾನಿಸ್ತಾನದ ಮೇಲೂ ಚೀನಾ ಕಣ್ಣಿಟ್ಟಿದೆ. ಒಮ್ಮೆ ಕರಾಚಿ ಬಂದರಿನಿಂದ ಉಪ್ಪಿನ ಹೆಸರಿನಲ್ಲಿ ಕಳ್ಳಸಾಗಣೆ ಮಾಡಲಾದ 10 ಮೆಟ್ರಿಕ್ ಟನ್ ಕತ್ತೆ ಚರ್ಮವನ್ನು ವಶಪಡಿಸಿಕೊಳ್ಳಲಾಯಿತು. ಅದನ್ನು ಹಾಂಗ್ ಕಾಂಗ್ ಮೂಲಕ ಚೀನಾಕ್ಕೆ ಕಳ್ಳಸಾಗಣೆ ಮಾಡಲು ಪ್ರಯತ್ನಿಸಲಾಗುತ್ತಿತ್ತು. ಬೇಡಿಕೆ ಹೆಚ್ಚಾದಂತೆ, ಪಾಕಿಸ್ತಾನದಿಂದ ಚೀನಾಕ್ಕೆ ಕತ್ತೆಗಳ ಕಳ್ಳಸಾಗಣೆಯೂ ಹೆಚ್ಚಾಯಿತು. ಆದಾಗ್ಯೂ, ಈ ರೀತಿ ಕತ್ತೆಗಳನ್ನು ವಧೆ ಮಾಡುವುದು ದೊಡ್ಡ ಸಮಸ್ಯೆಗೆ ಕಾರಣವಾಗಬಹುದು ಮತ್ತು ಬದಲಾಗಿ ಅವರು ಬೇರೆ ಮಾರ್ಗಗಳನ್ನು ಹುಡುಕಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. (ಏಜೆನ್ಸೀಸ್)
ಈ 3 ರಾಶಿಯ ಪುರುಷರು ಪ್ರೀತಿಗೋಸ್ಕರ ತಮ್ಮ ಪ್ರಾಣ ಕೊಡಲು ಸಿದ್ಧರಾಗಿರುತ್ತಾರೆ! ನಿಮ್ಮದು ಇದೇ ರಾಶಿನಾ? Zodiac Signs