

Tamil Actors : ಕೃತಕ ಬುದ್ಧಿಮತ್ತೆ (AI- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಸಾಧನ ಸಿಕ್ಕಾಪಟ್ಟೆ ಖ್ಯಾತಿ ಪಡೆದುಕೊಂಡಿದೆ. ಈ AI ಎಷ್ಟು ಆಧುನಿಕವಾಗಿದೆ ಅಂದರೆ ಜನರು ಹೆಚ್ಚು ಶ್ರಮವಹಿಸದೇ ಎಲ್ಲ ಬಗೆಯ ಫೋಟೋಗಳನ್ನು ರಚಿಸಬಹುದು. ಕೆಲವೊಮ್ಮೆ ಭವಿಷ್ಯದಲ್ಲಿ ವಸ್ತುಗಳು ಅಥವಾ ವ್ಯಕ್ತಿಗಳು ಹೇಗೆ ಕಾಣುತ್ತಾರೆ ಎಂಬುದನ್ನು ಸಹ AI ಮೂಲಕ ಊಹಿಸಿಕೊಳ್ಳಬಹುದು. ಅಲ್ಲದೆ, ತಮ್ಮ ಕಲ್ಪನೆ ಹಾಗೂ ಇಷ್ಟದ ಪಾತ್ರವನ್ನು ಪ್ರಮುಖ ವ್ಯಕ್ತಿಗಳ ಮೇಲೆ ರಚಿಸಬಹುದು.
ಈ 21ನೇ ಶತಮಾನದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಜಗತ್ತಿನಲ್ಲಿ ಅತಿ ದೊಡ್ಡ ಬದಲಾವಣೆ ಮತ್ತು ಪರಿಣಾಮವನ್ನು ಉಂಟುಮಾಡುತ್ತಿದೆ. ನಾವು ಊಹಿಸಲೂ ಸಾಧ್ಯವಾಗದಷ್ಟು ಕೆಲಸಗಳು ಕ್ಷಣಾರ್ಧದಲ್ಲಿ ಪೂರ್ಣಗೊಳ್ಳುತ್ತಿವೆ ಎಂಬುದು ಆಶ್ಚರ್ಯಕರವಾಗಿದೆ. ಮುಂದೆ ಎಲ್ಲಾ ಕ್ಷೇತ್ರಗಳನ್ನು ಇದೇ ಎಐ ಟೆಕ್ನಾಲಜಿ ಆವರಿಸಿಕೊಂಡರೆ ಅಚ್ಚರಿಪಡಬೇಕಿಲ್ಲ.
ಈ ಹಿಂದೆ ಎಐ ಕಲಾವಿದರೊಬ್ಬರು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟರ್ ಹೊರತಾಗಿ ಗಗನಯಾತ್ರಿ, ಯೋಧ, ಫೈಟರ್, ಪೈಲಟ್ ಹಾಗೂ ಪೊಲೀಸ್ ಅವತಾರದಲ್ಲಿ ಹೇಗೆ ಕಾಣುತ್ತಿದ್ದರು ಎಂಬುವನ್ನು ರಚಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು ಮತ್ತು ಅಭಿಮಾನಿಗಳು ಫೋಟೋಗಳನ್ನು ನೋಡಿ ತುಂಬಾ ಖುಷಿಯಾಗಿದ್ದರು. ಇದರ ಬೆನ್ನಲ್ಲೇ ಮತ್ತೊಬ್ಬ ಎಐ ಕಲಾವಿದ, ಜಾಗತಿಕ ಮಾಧ್ಯಮಗಳ ಗಮನ ಸೆಳೆದ ಬಾರ್ಬಿ ಚಿತ್ರದಿಂದ ಪ್ರೇರಣೆಯಾದ ಪಾತ್ರಗಳಲ್ಲಿ ಭಾರತದ ರಾಜಕೀಯ ಗಣ್ಯರು ಹೇಗೆ ಕಾಣಿಸುತ್ತಾರೆ ಎಂದು ಎಐ ಮೂಲಕ ರಚನೆ ಮಾಡಿದ್ದರು. ಪ್ರಧಾನಿ ಮೋದಿ, ಮಾಜಿ ಲೋಕಸಭಾ ಸದಸ್ಯ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಮಾಜಿ ವಿಪಕ್ಷ ನಾಯಕಿ ಸೋನಿಯಾ ಗಾಂಧಿ, ಆರ್ಜೆಡಿ ಲಾಲು ಪ್ರಸಾದ್ ಯಾದವ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕ ನಿತಿನ್ ಗಡ್ಕರಿ ಅವರಿಗೆ ಬಾರ್ಬಿ ಅವತಾರವನ್ನು ರಚಿಸಿದ್ದರು.
ಇದೇ ಎಐ ಟೆಕ್ನಾಲಜಿಯನ್ನು ಬಳಸಿಕೊಂಡು ಇದೀಗ ತಮಿಳು ಚಿತ್ರರಂಗದ ಖ್ಯಾತ ನಟರನ್ನು ಮಹಿಳಾ ಪಾತ್ರಗಳಲ್ಲಿ ರಚಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸ್ಟಾರ್ ನಟರು ಮಹಿಳೆಯರಾಗಿ ಗರ್ಭ ಧರಿಸಿದ್ದರೆ ಹೇಗೆ ಕಾಣುತ್ತಿದ್ದರು ಎಂಬುದನ್ನು ಎಐ ವಿಡಿಯೋದಲ್ಲಿ ತೋರಿಸಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)