

ನವದೆಹಲಿ: ಕೃತಕ ಬುದ್ಧಿಮತ್ತೆ (AI- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಸಾಧನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಪಡೆದುಕೊಂಡಿದ್ದು, ಹಲವಾರು ಕಲಾವಿದರು ಇದನ್ನು ಬಳಸುತ್ತಿದ್ದಾರೆ. AI ಎಷ್ಟು ಆಧುನಿಕವಾಗಿದೆ ಅಂದರೆ ಜನರು ಹೆಚ್ಚು ಶ್ರಮವಹಿಸದೇ ಎಲ್ಲ ಬಗೆಯ ಫೋಟೋಗಳನ್ನು ರಚಿಸಬಹುದು. ಕೆಲವೊಮ್ಮೆ ಭವಿಷ್ಯದಲ್ಲಿ ವಸ್ತುಗಳು ಅಥವಾ ವ್ಯಕ್ತಿಗಳು ಹೇಗೆ ಕಾಣುತ್ತಾರೆ ಎಂಬುದನ್ನು ಸಹ AI ಮೂಲಕ ಊಹಿಸಿಕೊಳ್ಳಬಹುದು. ಅಲ್ಲದೆ, ತಮ್ಮ ಕಲ್ಪನೆ ಹಾಗೂ ಇಷ್ಟದ ಪಾತ್ರವನ್ನು ಪ್ರಮುಖ ವ್ಯಕ್ತಿಗಳ ಮೇಲೆ ರಚಿಸಬಹುದು.
ಈ ಹಿಂದೆ ಎಐ ಕಲಾವಿದರೊಬ್ಬರು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟರ್ ಹೊರತಾಗಿ ಗಗನಯಾತ್ರಿ, ಯೋಧ, ಫೈಟರ್, ಪೈಲಟ್ ಹಾಗೂ ಪೊಲೀಸ್ ಅವತಾರದಲ್ಲಿ ಹೇಗೆ ಕಾಣುತ್ತಿದ್ದರು ಎಂಬುವನ್ನು ರಚಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು ಮತ್ತು ಅಭಿಮಾನಿಗಳು ಫೋಟೋಗಳನ್ನು ನೋಡಿ ತುಂಬಾ ಖುಷಿಯಾಗಿದ್ದರು. ಇದರ ಬೆನ್ನಲ್ಲೇ ಮತ್ತೊಬ್ಬ ಎಐ ಕಲಾವಿದ, ಜಾಗತಿಕ ಮಾಧ್ಯಮಗಳ ಗಮನ ಸೆಳೆದ ಬಾರ್ಬಿ ಚಿತ್ರದಿಂದ ಪ್ರೇರಣೆಯಾದ ಪಾತ್ರಗಳಲ್ಲಿ ಭಾರತದ ರಾಜಕೀಯ ಗಣ್ಯರು ಹೇಗೆ ಕಾಣಿಸುತ್ತಾರೆ ಎಂದು ಎಐ ಮೂಲಕ ರಚನೆ ಮಾಡಿದ್ದರು. ಪ್ರಧಾನಿ ಮೋದಿ, ಮಾಜಿ ಲೋಕಸಭಾ ಸದಸ್ಯ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಮಾಜಿ ವಿಪಕ್ಷ ನಾಯಕಿ ಸೋನಿಯಾ ಗಾಂಧಿ, ಆರ್ಜೆಡಿ ಲಾಲು ಪ್ರಸಾದ್ ಯಾದವ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕ ನಿತಿನ್ ಗಡ್ಕರಿ ಅವರಿಗೆ ಬಾರ್ಬಿ ಅವತಾರವನ್ನು ರಚಿಸಿದ್ದರು.
ಇದೀಗ ಫಿಟ್ನೆಸ್ ಇನ್ಫ್ಲುಯೆನ್ಸರ್ ಒಬ್ಬರು ಎಐ ಟೆಕ್ನಾಲಜಿ ಬಳಸಿಕೊಂಡು ಬಾಲಿವುಡ್ ನಟಿಯರು ಬೊಜ್ಜು ತುಂಬಿಕೊಂದ ಅವತಾರದಲ್ಲಿ ಹೇಗೆ ಕಾಣುತ್ತಾರೆ ಎಂಬುದನ್ನು ರಚಿಸಿದ್ದಾರೆ. ಫಿಟ್ನೆಸ್ ಪ್ರಭಾವಿ ಮತ್ತು ಪೌಷ್ಟಿಕತಜ್ಞ ರಾಜನ್ ಸಿಬಲ್ ನಟಿಯರ ಫ್ಯಾಟಿ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಕರೀನಾ ಕಪೂರ್, ಅನನ್ಯಾ ಪಾಂಡೆ, ಮಲೈಕಾ ಅರೋರಾ, ಕಿಯಾರ ಅಡ್ವಾಣಿ, ಕಂಗನಾ ರಣಾವತ್, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಸೋನಂ ಬಜ್ವಾ ಅವರ ಫ್ಯಾಟಿ ಅವತಾರಗಳನ್ನು ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಭಿಮಾನಿಗಳ ಆಕ್ರೋಶ ರಾಜನ್ ಸಿಬಲ್ ಹಂಚಿಕೊಂಡಿರುವ ಪೋಸ್ಟ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಅನೇಕ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ಈ ಅವತಾರದಲ್ಲಿ ನೋಡಲು ಆಗುತ್ತಿಲ್ಲ ಎಂದಿದ್ದಾರೆ. ಕೂಡಲೇ ಪೋಸ್ಟ್ಗಳನ್ನುಮ ಡಿಲೀಟ್ ಮಾಡುವಂತೆ ಎಚ್ಚರಿಸಿದ್ದಾರೆ. ಇದಕ್ಕೆ ರಾಜನ್ ಸಿಬಲ್ ಸಹ ಪ್ರತಿಕ್ರಿಯೆ ನೀಡಿದ್ದು, ಈ ಪೋಸ್ಟ್ ಹಿಂದ ಯಾವುದೇ ದುರುದ್ದೇಶವಾಗಲಿ ಇಲ್ಲ ಮತ್ತು ಸ್ಟಾರ್ಗಳನ್ನು ಅವಮಾನಿಸಲು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಎಐ ಎಂದರೇನು?
ಕೃತಕ ಬುದ್ಧಿಮತ್ತೆ (ಎಐ) ಎನ್ನುವುದು ಕಂಪ್ಯೂಟರ್ ವಿಜ್ಞಾನದ ಶಾಖೆಯಾಗಿದೆ. ಮನುಷ್ಯರಂತೆ ಯೋಚಿಸಿ, ಕೆಲಸ ಮಾಡುವ ಬುದ್ಧಿವಂತ ಯಂತ್ರಗಳ ಅಭಿವೃದ್ಧಿಗೆ ಇದು ಒತ್ತು ನೀಡುತ್ತದೆ. ಚೆಸ್ ಆಡುವ ಕಂಪ್ಯೂಟರ್ಗಳು, ಸ್ವಯಂಚಾಲಿತ ಕಾರ್ಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಸಾರಿಗೆ, ಉತ್ಪಾದನೆ, ಹಣಕಾಸು, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಎಐ ಬಳಸಲಾಗುತ್ತಿದೆ. ಯಾಂತ್ರೀಕರಣ, ಚಾಣಾಕ್ಷತನದ ನಿರ್ಧಾರ, ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ, ಪುನರಾವರ್ತಿತ ಕೆಲಸದ ಸುಲಭ ನಿರ್ವಹಣೆ ಮುಂತಾದವುಗಳು ಎಐನ ಪ್ರಯೋಜನಗಳಾಗಿವೆ. ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕ್ ಕಾರ್ತಿ ಅವರನ್ನು ‘ಕೃತಕ ಬುದ್ಧಿಮತ್ತೆಯ ಜನಕ’ ಎಂದು ಗುರುತಿಸುತ್ತಾರೆ. (ಏಜೆನ್ಸೀಸ್)