ತಿರುಪತಿ: ಜಗನ್ ಮೋಹನ್ ರೆಡ್ಡಿ ನೇತೃತ್ವದ YSRCP ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಜನಸೇನಾ ಪಕ್ಷದ ಕಾರ್ಯಕರ್ತರ ಮೇಲೆ ಮಹಿಳಾ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿರುವ ಘಟನೆ ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿಯಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸ್ ಅಧಿಕಾರಿ ಜನಸೇನಾ ಪಕ್ಷದ ಕಾರ್ಯಕರ್ತನ ಕಪಾಳಕ್ಕೆ ಹೊಡೆಯುತ್ತಿರುವುದು ಕಂಡು ಬರುತ್ತದೆ. ಈ ಕುರಿತು ಪರ-ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದೆ.
ಇತ್ತೀಚಿಗೆ ಕಾರ್ಯಕ್ರಮ ಒಂದರಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಮಾತನಾಡುವ ವೇಳೆ ಜನಸೇನಾ ಪಕ್ಷದ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಜಗನ್ ಹೇಳಿಕೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯಾದ್ಯಂತ ಪವನ್ ಅಭಿಮಾನಿಗಳು ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದರು.
ಇದನ್ನೂ ಓದಿ: VIDEO| ಆನ್ಲೈನ್ ಗೇಮಿಂಗ್ ಗೀಳಿಗೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಬಾಲಕ
ಬುಧವಾರ ಶ್ರೀಕಾಳಹಸ್ತಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿ ಜನಸೇನಾ ಕಾರ್ಯಕರ್ತರು ಆಕ್ರೋಶವನ್ನು ಹೊರಹಾಕಿದ್ದರು. ಸಿಎಂ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ವಾಗ್ವಾದ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನಾ ನಿರತರನ್ನು ಠಾಣೆಯ ಮುಂಭಾಗ ಹಾಜರುಪಡಿಸಿದ ವೇಳೆ ಪೊಲೀಸ್ ಅಧಿಕಾರಿ ಅಂಜು ಯಾದವ್ ಜನಸೇನಾ ಪಕ್ಷದ ಕಾರ್ಯಕರ್ತನಿಗೆ ಎರಡು ಕೈಗಳಿಂದ ಕಪಾಳಕ್ಕೆ ಹೊಡೆಯುತ್ತಿರುವುದು ಕಂಡು ಬಂದಿದ್ದು, ಇದರ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ.
ಈ ಸಂಬಂಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪೊಲೀಸ್ ಅಧಿಕಾರಿ YSRCP ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಹಲ್ಲೆ ನಡೆಸಿದ ಅಧಿಕಾರಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಜನಸೇನಾ ಪಕ್ಷ ಆಗ್ರಹಿಸಿದೆ.