VIDEO| ಲಂಚ ಪಡೆಯುತ್ತಿದ್ದ ಪೊಲೀಸ್​ ಅಧಿಕಾರಿ ಸಿಬಿಐ ಬಲೆಗೆ

CBI Raid
Published on

ನವದೆಹಲಿ: ಅಂಗಡಿ ಮಾಲೀಕರೊಬ್ಬರಿಂದ 50 ಸಾವಿರ ರೂಪಾಯಿ ಲಂಚ ಪಡೆಯುವಾಗ ಪೊಲೀಸ್​ ಪೇದೆಯೊಬ್ಬರು ಸಿಬಿಐ ಅಧಿಕಾರಿಗಳಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿರುವ ಘಟನೆ ನವದೆಹಲಿಯ ಮಂಗೋಲ್​ಪುರಿ ಪ್ರದೇಶದಲ್ಲಿ ನಡೆದಿದೆ.

ಬಂಧಿತ ಪೊಲೀಸ್​ ಪೇದೆಯನ್ನು ಭೀಮ್​ ಸಿಂಗ್​ ಎಂದು ಗುರುತಿಸಲಾಗಿದ್ದು, ಮಂಗೋಲ್​ಪುರಿ ಪ್ರದೇಶದಲ್ಲಿರುವ ಅಂಗಡಿ ಮಾಲೀಕರೊಬ್ಬರಿಗೆ ಪಾರ್ಕಿಂಗ್​ ಜಾಗದ ವಿಚಾರವಾಗಿ ಲಂಚ ಪಡೆಯುವ ವೇಳೆ ಸಿಬಿಐ ಬಲೆಗೆ ಬಿದ್ದಿದ್ದಾರೆ.

ಬಂಧಿತ ಪೇದೆ ಭೀಮ್​ ಸಿಂಗ್​ ಮಂಗೋಲ್​ಪುರಿ ಪ್ರದೇಶದಲ್ಲಿರುವ ಅಂಗಡಿ ಮಾಲೀಕರೊಬ್ಬರಿಗೆ ಪಾರ್ಕಿಂಗ್​ಗಾಗಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದೀರಾ ಎಂದು ಹೇಳಿ ಮೊದಲಿಗೆ ಧಮ್ಕಿ ಹಾಕಿದ್ದರು. ಈ ವಿಚಾರವನ್ನು ಮೇಲಿನ ಅಧಿಕಾರಿಗಳಿಗೆ ಹೇಳಿ ಅಂಗಡಿಯನ್ನು ಖಾಲಿ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿ ಹೊರಟು ಹೋಗಿದ್ದರು.

ಕೆಲ ದಿನಗಳ ಬಳಿಕ ಈ ಸಂಬಂದ ಅಂಗಡಿ ಮಾಲೀಕನೊಂದಿಗೆ ತಗಾದೆ ತೆಗೆದಿರುವ ಪೊಲೀಸ್​ ಪೇದೆ ಭೀಮ್​ ಸಿಂಗ್​ ವಿಚಾರವನ್ನು ಯಾರಿಗೂ ಹೇಳಬಾರದೆಂದರೆ 50 ಸಾವಿರ ರೂಪಾಯಿ ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಪೊಲೀಸ್​ ಪೇದೆಯ ಕಿರುಕುಳದಿಂದ ತೀವ್ರವಾಗಿ ಮನನೊಂದಿದ್ದ ಅಂಗಡಿ ಮಾಲೀಕ ಈ ಕುರಿತು ಸಿಬಿಐಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆರೋಪಿಗೆ ಹಣ ಕೊಡಲು ಒಪ್ಪಿರುವುದಾಗಿ ಅಂಗಡಿ ಮಾಲೀಕನಿಗೆ ಹೇಳಲು ಸೂಚಿಸಿದ್ದಾರೆ. ಅಧಿಕಾರಿಗಖು ಹೇಳಿದಂತೆ ಕೇಳಿದ ಅಂಗಡಿ ಮಾಲೀಕ ಪೊಲೀಸ್​ ಪೇದೆಯನ್ನು ತನ್ನ ಅಂಗಡಿ ಬಳಿ ಬರುವಂತೆ ಹೇಳಿದ್ದಾನೆ. ಬಳಿಕ ಹಣ ಪಡೆಯಲು ಮೂವರು ಪೊಲೀಸ್​ ಪೇದೆಗಳೊಂದಿಗೆ ಆಗಮಿಸಿದ ಭೀಮ್​ ಸಿಂಗ್​​ ರೆಡ್​ ಹ್ಯಾಂಡ್​ ಆಗಿ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಇನ್ನಿಬ್ಬರು ಪೊಲೀಸರು ಪೇದೆ ಭೀಮ್​ ಸಿಂಗ್​ನನ್ನು ಬಿಟ್ಟು ಓಡುತ್ತಿರುವುದು ಕಂಡು ಬರುತ್ತದೆ. ಅಧಿಕಾರಿಗಳು ಆತನನ್ನು ವಶಕ್ಕೆ ಪಡೆಯುತ್ತಿರುವ ದೃಶ್ಯ ಎಲ್ಲೆಡೆ ವೈರಲ್​ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net