

ಅಹಮದಾಬಾದ್: ವಿಚಿತ್ರ ಘಟನೆಯೊಂದರಲ್ಲಿ ಕೌಟುಂಬಿಕ ಕಲಹ ಪ್ರಕರಣದಲ್ಲಿ ಪತ್ನಿಯೇ ಪತಿಯ ವಿರುದ್ಧ ದೂರು ನೀಡಿ ಬಳಿಕ ಆತನಿಗೆ ಜಾಮೀನು ಕೊಡಿಸಿರುವ ಘಟನೆ ಗುಜರಾತಿನ ಮೆಹಸಾನಾ ಜಿಲ್ಲೆಯಲ್ಲಿ ನಡೆದಿದೆ. ಪ್ರೇಮ್ಚಂದ್ ಮಾಲಿ ಮತ್ತು ಅವರ ಪತ್ನಿ ಸೋನು ಈ ರೀತಿಯ ವಿಚಿತ್ರ ವರ್ತನೆಗೆ ಹೆಸರುವಾಸಿಯಾಗಿರುವ ದಂಪತಿ.
ಪ್ರೇಮ್ಚಂದ್ ಮಾಲಿ ಮತ್ತು ಸೋನು ದಂಪತಿಗಳು 2001ರಲ್ಲಿ ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ 13 ವರ್ಷಗಳ ಬಳಿಕ ದಾಂಪತ್ಯದಲ್ಲಿ ಕಲಹ ಉಂಟಾಗಿ ಪತ್ನಿಗೆ ತಿಂಗಳು ಎರಡು ಸಾವಿರ ರೂಪಾಯಿ ಮಾಸಾಶಾನ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು.
ವೃತ್ತಿಯಲ್ಲಿ ದಿನಗೂಲಿ ನೌಕರನಾಗಿರುವ ಪ್ರೇಮ್ಚಂದ್ ನ್ಯಾಯಾಲಯದ ಆದೇಶವನ್ನು ಪಾಲಿಸುವಲ್ಲಿ ವಿಫಲರಾಗಿ ಜೈಲು ಸೇರಿದ್ದರು. ತನ್ನ ಪತಿ ಜೈಲಿನಲ್ಲಿರುವ ವಿಚಾರ ಅರಿತ ಪತ್ನಿ ನ್ಯಾಯಾಲಯಕ್ಕೆ ಅಲೆದಾಡಿ ಆತನಿಗೆ ಜಾಮೀನು ಕೊಡಿಸಿದ್ದಾಳೆ. ಗಂಡ-ಹೆಂಡತಿ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಸಹ ಇಬ್ಬರ ನಡುವಿನ ಸಾಮರಸ್ಯ ಮಾತ್ರ ಕದಡಿರಲಿಲ್ಲ.
ಇದೇ ರೀತಿ 2016 ರಿಂದ 2020ರವರೆಗೂ ಪ್ರೇಮ್ಚಂದ್ ನ್ಯಾಯಾಲಯದ ಆದೇಶವನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆಂಬ ಕಾರಣಕ್ಕೆ ಅವರನ್ನು ಜೈಲಿಗೆ ಹಾಕಲಾಗಿತ್ತು. ಆದರೆ, ಪ್ರತಿ ಬಾರಿಯೂ ಅತನ ಪತ್ನಿ ನ್ಯಾಯಾಲಯದ ಮೊರೆ ಹೋಗಿ ಜಾಮೀನು ಕೊಡಿಸುತ್ತಿದ್ದಳು. ಇದೇ ರೀತಿ ಜುಲೈ 4ರಂದು ಗಂಡ-ಹೆಂಡತಿ ನಡುವೆ ವಿಚಾರಕ್ಕೆ ಒಂದಕ್ಕೆ ಜಗಳ ಶುರುವಾಗಿದ್ದು, ಆಗಲೂ ಸಹ ಇದೇ ರೀತಿ ಮಾಡಲಾಗಿದೆ.
ಈ ರೀತಿ 10 ವರ್ಷಗಳಲ್ಲಿ ಏಳು ಬಾರಿ ಪ್ರೇಮ್ಚಂದ್ಗೆ ಆತನ ಪತ್ನಿ ದೂರು ನೀಡಿ ಜಾಮೀನು ಕೊಡಿಸಿದ್ದಾಳೆ. ಇದನ್ನು ಕಂಡು ಬೇಸತ್ತಿದ್ದ ಪತಿ ಪ್ರೇಮ್ಚಂದ್ ಪತ್ನಿ ಹಾಗೂ ಪುತ್ರನ ವಿರುದ್ಧ ಹಲ್ಲೆ ಹಾಗೂ ಕೊಲೆ ಯತ್ನ ದೂರು ದಾಖಲಿಸಿ ತನ್ನ ತಾಯಿಯ ಜೊತೆ ವಾಸಿಸುವುದಾಗಿ ಹೇಳಿ ಹೊರಟು ಹೋಗಿದ್ದಾರೆ. ಇದೀಗ ಈ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಇದನ್ನು ಕಂಡು ಜನ ಪರ-ವಿರೋಧದ ಕುರಿತು ಮಾತನಾಡುತ್ತಿದ್ದಾರೆ.