More

    ರಾಜಧಾನಿಯಲ್ಲಿ ಶನಿವಾರ ಅಹೋರಾತ್ರಿ ತಾಳಮದ್ದಲೆ; ಕೃಷ್ಣ ಸಂಧಾನ-ರಾವಣ ವಧೆ-ಕರ್ಣಾರ್ಜುನ ಆಖ್ಯಾನ

    ಬೆಂಗಳೂರು: ಯಕ್ಷಗಾನ ತಾಳಮದ್ದಲೆ ಎಂದರೆ ಜಗತ್ತಿನಲ್ಲಿಯೇ ಬೇರೆಲ್ಲೂ ಇರದಂಥ ವಿಶಿಷ್ಟ ಕಲಾಪ್ರಕಾರ. ಯಕ್ಷಗಾನೇತರ ಪ್ರೇಕ್ಷಕ ವಲಯ ಅದರಲ್ಲೂ ವಿಶೇಷವಾಗಿ ಚಿಂತಕರು, ಸಾಹಿತ್ಯಾಸಕ್ತರಿಗೂ ಇಷ್ಟವಾಗುವ ಅಪರೂಪದ ಕಲೆ. ಕುಳಿತಲ್ಲೇ ಪುರಾಣ ಪ್ರಪಂಚಕ್ಕೆ ಕರೆದೊಯ್ಯುವ ಈ ಕಲಾಪ್ರದರ್ಶನ ಯಕ್ಷಗಾನದ ನೆಲದಲ್ಲಿ ರಾತ್ರಿ ಬೆಳಗಿನವರೆಗೆ ವಿಚಾರ ಮಂಥನದ ವೇದಿಕೆಯಾಗುತ್ತಿದ್ದ ಕಾಲ ಒಂದಿತ್ತು.

    ರಾತ್ರಿಯ ನೀರವದಲ್ಲಿ ರಾಮಾಯಣ, ಮಹಾಭಾರತದ ಪಾತ್ರಗಳಿಗೆ ನಿರ್ದಿಷ್ಟ ಚೌಕಟ್ಟಿನಲ್ಲಿ ಹೊಸ ಹೊಸ ಹೊಳಹು ಅಲ್ಲಿ ಸೃಷ್ಟಿಯಾಗುತ್ತಿತ್ತು. ಅಪ್ಪಿ ತಪ್ಪಿಯೂ ಇಂಗ್ಲಿಷ್ ಪದ ಬಳಸದ ಅರ್ಥಧಾರಿಗಳು ಪಾತ್ರವನ್ನು ಕಡೆದು ನಿಲ್ಲಿಸುವ ಪರಿ ಹೊಸಲೋಕವೊಂದನ್ನೇ ಸೃಷ್ಟಿಸುವುದು ಈ ಕಲಾಪ್ರಕಾರದ ವೈಶಿಷ್ಟ್ಯಗಳಲ್ಲೊಂದು.

    ಕಾಲದ ಬದಲಾವಣೆಯೊಂದಿಗೆ ತಾಳಮದ್ದಲೆಗಳು ಅಹೋರಾತ್ರಿ ನಡೆಯುವುದು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ರಾತ್ರಿಯಿಡೀ ತಾಳಮದ್ದಲೆ ನಡೆದ ಉದಾಹರಣೆ ಇಲ್ಲ. ಆದರೆ ಅಂಥದೊಂದು ಪ್ರಯತ್ನಕ್ಕೆ ಇದೇ ಮೊದಲಬಾರಿಗೆ ಯಕ್ಷಗಾನ ಸಂಘಟಕ ನಾಗರಾಜ ಶೆಟ್ಟಿ ನೈಕಂಬ್ಳಿ ಮತ್ತು ಸ್ನೇಹಿತರು ಮುಂದಾಗಿದ್ದಾರೆ.

    Yakshagana

    ಇದನ್ನೂ ಓದಿ: 61ನೇ ವಸಂತಕ್ಕೆ ಕಾಲಿಟ್ಟ ನಟ ಡಾ. ಶಿವರಾಜ್​ಕುಮಾರ್​; ಸಿಎಂ ಸೇರಿದಂತೆ ಹಲವು ಗಣ್ಯರಿಂದ ಶುಭ ಹಾರೈಕೆ

    ಜುಲೈ 22 ಶನಿವಾರದಂದು ರವೀಂದ್ರ ಕಲಾಕ್ಷೇತ್ರದಲ್ಲಿ ರಾತ್ರಿ 10 ಗಂಟೆಯಿಂದ ಪೂರ್ಣರಾತ್ರಿ ತಾಳಮದ್ದಲೆ ಆಯೋಜನೆಗೊಂಡಿದೆ. ಕೃಷ್ಣ ಸಂಧಾನ -ರಾವಣ ವಧೆ – ಕರ್ಣಾರ್ಜುನ ಆಖ್ಯಾನಗಳು ಆಯೋಜನೆಗೊಂಡಿದ್ದು ಪ್ರಸಿದ್ಧ ಅರ್ಥಧಾರಿಗಳಾದ ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಬಾರ್ ಸಮೋ, ವಾಸುದೇವ ರಂಗ ಭಟ್, ಸಂಕದಗುಂಡಿ ಗಣಪತಿ ಭಟ್ ಮೊದಲಾದವರು ಪಾಲ್ಗೊಳ್ಳುವರು. ಹಿಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರಾದ ರವಿಚಂದ್ರ ಕನ್ನಡಿಕಟ್ಟೆ, ಗಣೇಶಹೆಬ್ರಿ, ಚಂದ್ರಕಾಂತ ಮೂಡಬೆಳ್ಳೆ, ಅವಿನಾಶ ಬೈಪಡಿತ್ತಾಯ, ಅಕ್ಷಯ ಆಚಾರ್ಯ, ಕಾರ್ತಿಕ್ ಧಾರೇಶ್ವರ, ಅರ್ಜುನ್ ಕೋರ್ಡೈಲ್ ಭಾಗವಹಿಸುವರು.

    ಈ ಕಾರ್ಯಕ್ರಮದ ಪ್ರವೇಶದರ ಕೇವಲ 1 ರೂಪಾಯಿ ಎನ್ನುವುದು ವಿಶೇಷ. ತಾಳಮದ್ದಲೆಯ ಸವಿಯನ್ನು ರಾಜಧಾನಿಯ ಪ್ರೇಕ್ಷಕರಿಗೆ ಉಣಬಡಿಸುವ ಆಶಯ ಸಂಘಟಕರದು. ವಿವರಗಳಿಗೆ ನಾಗರಾಜ ಶೆಟ್ಟಿ ಅವರನ್ನು 9741474255 ಮೂಲಕ ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts