More

    ಕೇಂದ್ರ ಸರ್ಕಾರದಿಂದ ವೇಗದ ಅಭಿವೃದ್ಧಿ

    ದಾವಣಗೆರೆ : ನಗರದ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೇಂದ್ರದಿಂದ ದಾವಣಗೆರೆ ಜಿಲ್ಲೆಗೆ ನೀಡಿರುವ ಕೊಡುಗೆಗಳ ಬಗ್ಗೆ ಪ್ರಸ್ತಾಪಿಸಿದರು.
     ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳಾಗಿವೆ. ದಾವಣಗೆರೆ ಮತ್ತು ಹರಿಹರ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ತುಮಕೂರು-ದಾವಣಗೆರೆ ರೈಲು ಮಾರ್ಗದ ಕೆಲಸ ಪ್ರಗತಿಯಲ್ಲಿದೆ. ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಸ್ಥಾಪನೆಯಿಂದ ಯುವಕರಿಗೆ ಸಹಾಯವಾಗಿದೆ. ಜವಳಿ ಉದ್ಯಮಕ್ಕೂ ವೇಗ ದೊರಕಿದೆ ಎಂದು ತಿಳಿಸಿದರು.
     ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಗತಿಯಲ್ಲಿ ಆಗಿವೆ. 2014 ಕ್ಕಿಂತ ಮೊದಲು ರಾಜ್ಯದಲ್ಲಿ 25 ರಾಷ್ಟ್ರೀಯ ಹೆದ್ದಾರಿಗಳಿದ್ದವು, ಅವುಗಳ ಸಂಖ್ಯೆ ಈಗ 47ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.
     ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರ, ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಮತ ಹಾಕುವಂತೆ ಮನವಿ ಮಾಡಿದ ಅವರು, ನಿಮ್ಮ ಒಂದೊಂದು ಮತವೂ ನಮ್ಮ ಸಂಕಲ್ಪಗಳನ್ನು ಗಟ್ಟಿಗೊಳಿಸುತ್ತವೆ. ನಿಮ್ಮ ಆಶೀರ್ವಾದ ಕೇಳಲು ಬಂದಿರುವೆ. ಹಿಂದಿನ ದಾಖಲೆಗಳನ್ನು ಮುರಿಯುವ ರೀತಿಯಲ್ಲಿ ಮತದಾನ ಮಾಡಿ ಎಂದು ಹೇಳಿದರು.
     ನಿಮ್ಮ ಭಾಗದ ಮನೆಗಳಿಗೆ ಭೇಟಿ ನೀಡಿ, ಮೋದಿ ಅವರು ನಿಮಗೆ ನಮಸ್ಕಾರ ಹೇಳಿದ್ದಾರೆಂದು ತಿಳಿಸಿ. ನನ್ನ ಇದೊಂದು ಕೆಲಸ ಮಾಡಿಕೊಡುತ್ತೀರಾ ಎಂದು ಕಾರ್ಯಕ್ರಮಕ್ಕೆ ಬಂದಿದ್ದ ಕಾರ್ಯಕರ್ತರು, ಅಭಿಮಾನಿಗಳಿಗೆ ಕೇಳಿಕೊಂಡರು.
     ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ಈ ಚುನಾವಣೆ ಪ್ರಜಾಪ್ರಭುತ್ವದ ದೊಡ್ಡ ಸಂಭ್ರಮವಾಗಿದೆ. ಗ್ಯಾರಂಟಿ ಯೋಜನೆಗಳು ಮೇಲ್ನೋಟಕ್ಕೆ ಸಿಹಿ ಎನಿಸಬಹುದು, ಆದರೆ ಭವಿಷ್ಯದ ದೃಷ್ಟಿಯಿಂದ ಅವುಗಳಿಂದ ನಷ್ಟವೇ ಆಗಲಿದೆ ಎಂದು ತಿಳಿಸಿದರು.
     ತಾವು ಪತಿ ಅಂಬರೀಷ್ ಜತೆಗೆ ದಾವಣಗೆರೆಗೆ ಭೇಟಿ ನೀಡಿದ್ದ ದಿನಗಳನ್ನು ಮೆಲುಕು ಹಾಕಿದ ಅವರು, ದಾವಣಗೆರೆ ಬೆಣ್ಣೆದೋಸೆ ಅಂಬರೀಷ್ ಅವರಿಗೆ ಇಷ್ಟದ ತಿಂಡಿಯಾಗಿತ್ತು ಎಂದು ಹೇಳಿದರು.
     ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಒಟ್ಟು 13 ಸಾವಿರ ಕೋಟಿ ರೂ.ಗಳನ್ನು ತಂದಿರುವೆ. ಪ್ರಧಾನಿ ಮೋದಿ ವಿಶ್ವ ನಾಯಕರಾಗಿದ್ದು ದೇಶದ ಆರ್ಥಿಕ ಸ್ಥಿತಿಯನ್ನು ಜಾಗತಿಕ ಮಟ್ಟದಲ್ಲಿ 5ನೇ ಸ್ಥಾನಕ್ಕೆ ತಂದಿದ್ದಾರೆ ಎಂದರು.
     ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಪ್ರಧಾನಿ ಮೋದಿ ಅವರು ಜನರಿಗಾಗಿ ಹಲವು ಯೋಜನೆಗಳನ್ನು ನೀಡಿದ್ದಾರೆ. ಮಹಿಳೆಯರಿಗಾಗಿಯೂ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ರಾಜ್ಯಕ್ಕೆ 3454 ಕೋಟಿ ರೂ. ಬರ ಪರಿಹಾರ ನೀಡುವ ಮೂಲಕ ರೈತರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ ಎಂದು ಹೇಳಿದರು.
     ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಇದು ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಾಗಿದ್ದು ಮತದಾರರು ವಿವೇಚನೆಯಿಂದ ಹಕ್ಕು ಚಲಾಯಿಸಬೇಕು ಎಂದರು.
     ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಅರುಣ್ ಕುಮಾರ್ ಪೂಜಾರ್, ಎಂಎಲ್ಸಿಗಳಾದ ಎನ್. ರವಿಕುಮಾರ್, ಕೆ.ಎಸ್. ನವೀನ್, ಮಾಜಿ ಎಂಎಲ್ಸಿ ಡಾ.ಎ.ಎಚ್. ಶಿವಯೋಗಿಸ್ವಾಮಿ, ಮುಖಂಡರಾದ ಜಿ.ಎಸ್. ಅನಿತ್ ಕುಮಾರ್, ಅಜಯ ಕುಮಾರ್, ಲೋಕಿಕೆರೆ ನಾಗರಾಜ, ತುಮ್‌ಕೋಸ್ ಶಿವಕುಮಾರ್, ಮಾಡಾಳು ಮಲ್ಲಿಕಾರ್ಜುನ್ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಚಿದಾನಂದಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts