More

    ಚುನಾವಣೆ ಮೂಡ್‌ನಿಂದ ಹೊರಬರಲು ಯತ್ನ, ಕುಟುಂಬಸ್ಥರ ಜತೆ ಕಾಲ ಕಳೆದ ಅಭ್ಯರ್ಥಿಗಳು, ಹೇಗಿತ್ತು ಗೊತ್ತಾ ಕೈ-ಕಮಲ ನಾಯಕರ ದಿನಚರಿ?

    ವಿಜಯಪುರ: ಕಳೆದೊಂದು ತಿಂಗಳಿನಿಂದ ಅಬ್ಬರದ ಪ್ರಚಾರ, ಬಹಿರಂಗ ಸಮಾವೇಶ, ರೋಡ್ ಶೋ, ಮನೆ ಮನೆಗೆ ತೆರಳಿ ಮತ ಯಾಚನೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದು ರಾಜಕೀಯ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಬುಧವಾರ ವಿಶ್ರಾಂತಿ ಮೂಡ್‌ಗೆ ಜಾರಿದರು.

    18 ನೇ ಲೋಕಸಭೆ ಚುನಾವಣೆಗೆ ಮಂಗಳವಾರ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಹಾಗೂ ಮುಖಂಡರು ವಿಶ್ರಾಂತಿಗೆ ತೆರಳಿದ್ದರು. ಹಸಿವು, ನಿದ್ರೆ, ಮನೆ, ಕುಟುಂಬ ಮರೆತು ಲೋಕಸಭೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದ ಅಭ್ಯರ್ಥಿಗಳು ಇದೀಗ ನಿರಾಳರಾಗಿ ಕುಟುಂಬಸ್ಥರೊಂದಿಗೆ ಕಾಲ ಕಳೆದರು. ಏತನ್ಮಧ್ಯೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸೋಲು-ಗೆಲುವಿನ ಲೆಕ್ಕಾಚಾರ ನಡೆಸಿದರು.

    ಮುಖಂಡರ ಜತೆ ಹರಟೆ

    ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಕುಟುಂಬಸ್ಥರೊಡನೆ ಕಾಲ ಕಳೆದರು. ಬಳಿಕ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಬೆರೆತು ಹರಟಿದರು. ಚುನಾವಣೆ ಮುಗಿದರೂ ಕೆಲ ಕಾರ್ಯಕರ್ತರು ಎಂದಿನಂತೆ ಮನೆ ಮುಂದೆ ಝಂಡಾ ಹೂಡಿದ್ದರು. ಮುಖಂಡರುಗಳು ಚುನಾವಣೆ ಕುರಿತ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದು ಕಂಡು ಬಂತು. ಪ್ರಚಾರ ವೇಳೆ ನಡೆದ ಘಟನಾವಳಿಗಳು ಹಾಗೂ ಮತದಾನದ ದಿನ ಎದುರಿಸಿದ ಕೆಲ ಸವಾಲುಗಳ ಬಗ್ಗೆ ಮುಖಂಡರ ಜತೆ ಸ್ವಾರಸ್ಯಕರವಾಗಿ ಹರಟುತ್ತಿದ್ದರು. ಯಾವ ಯಾವ ಭಾಗದಲ್ಲಿ ಎಷ್ಟು ಮತ ಹೆಚ್ಚಿಗೆ ಬರಬಹುದೆಂಬ ಲೆಕ್ಕಾಚಾರ ಸಹ ಜೋರಾಗಿತ್ತು. ಲೀಡರ್‌ಗಳು ತಮ್ಮ ತಮ್ಮ ಭಾಗದಲ್ಲಿ ಎಷ್ಟು ಲೀಡ್ ಆಗಬಹುದೆಂಬ ಅಂಕಿ-ಅಂಶ ಒಪ್ಪಿಸುತ್ತಿರುವುದು ಕಂಡು ಬಂತು.

    ಕಚೇರಿಗಳೆಲ್ಲ ಖಾಲಿ ಖಾಲಿ

    ಸದಾ ಕಾರ್ಯಕರ್ತರಿಂದ ಗಿಜಿಗುಡುತ್ತಿದ್ದ ಪಕ್ಷದ ಪ್ರಚಾರ ಕಾರ್ಯಾಲಯಗಳು ಮೌನಕ್ಕೆ ಜಾರಿದ್ದವು. ದಿನಕ್ಕೊಂದು ಸುದ್ದಿಗೋಷ್ಠಿ, ಕಾರ್ಯಕರ್ತರ ಸಭೆ, ಪ್ರಚಾರ ಸಾಮಗ್ರಿಗಳ ಭರಾಟೆಗಳಿಂದ ತುಂಬಿ ತುಳುಕುತ್ತಿದ್ದ ಕಚೇರಿಗಳಲ್ಲಿ ನಿಶಬ್ದ ಆವರಿಸಿತ್ತು. ಪ್ರಚಾರ ಸಾಮಗ್ರಿ ತೆರವುಗೊಳಿಸಿ ಕಚೇರಿ ಸ್ವಚ್ಛಗೊಳಿಸಲಾಗುತ್ತಿತ್ತು. ವಾಹನಗಳ ಪಾರ್ಕಿಂಗ್ ಸ್ಥಳ ಬಿಕೋ ಎನ್ನುತ್ತಿದ್ದವು. ಬ್ಯಾನರ್‌ಗಳು, ಕರಪತ್ರಗಳು ನಿರ್ಲಕ್ಷೃಕ್ಕೆ ಒಳಗಾಗಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts