ಬೀಚ್​ನಲ್ಲಿ ವಾಕಿಂಗ್​ ಮಾಡುವಾಗ ಸಿಕ್ಕ ನಿಗೂಢ ವಸ್ತುವಿನಿಂದ ಮಹಿಳೆಗೆ ಖುಲಾಯಿಸಿತು ಅದೃಷ್ಟ!

Beach 1
Published on

ಬ್ಯಾಂಕಾಕ್​: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಮಹಿಳೆಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

ಹೌದು. ಮಹಿಳೆಯೊಬ್ಬಳು ಮೀನಿನ ವಾಂತಿಯಿಂದಲೇ ಮಿಲಿಯನೇರ್​ ಆಗಿರುವ ಬಲು ಅಪರೂಪದ ಘಟನೆ ಥಾಯ್ಲೆಂಡ್​ನಲ್ಲಿ ನಡೆದಿದೆ. ಮನೆಯ ಸಮೀಪದ ಸಮುದ್ರದ ದಂಡೆಯಲ್ಲಿ ಫೆ.23ರಂದು ನಡೆದು ಹೋಗುತ್ತಿದ್ದ ಸಿರಿಪಾರ್ನ್ ನಿಯಾಮ್ರಿನ್ (49) ಎಂಬಾಕೆಗೆ ಬಂಡೆಗಲ್ಲಿನಂತಹ ಎರಡು ಉಂಡೆಗಳು ಥಾಯ್ಲೆಂಡ್​ನ ಥಾಮ್ಮರತ್​ ಪ್ರಾಂತ್ಯದ ನಖೋನ್​ ಸಿ ಸಮುದ್ರದ ದಂಡೆಯಲ್ಲಿ ಕಣ್ಣಿಗೆ ಬಿದ್ದಿವೆ.

ಆ ಉಂಡೆಗಳಿಂದ ಮೀನಿನ ವಾಸನೆ ಬರುತ್ತಿರುವುದನ್ನು ಗಮನಿಸಿ, ಅದನ್ನು ತೆಗೆದುಕೊಂಡಿದ್ದಾಳೆ. ಬಹುಶಃ ಇದು ಬೆಲೆಬಾಳಬಹುದೆಂಬ ಭರವಸೆಯಿಂದಲೇ ಮನೆಗೆ ತೆಗೆದುಕೊಂಡು ಬಂದಿದ್ದಾಳೆ. ಇದಾದ ಬಳಿಕ ನೆರೆಯವರ ಬಳಿ ಕೇಳಿದ್ದಾಳೆ. ಪತ್ತೆಯಾದ ವಸ್ತುವು ತಿಮಿಂಗಿಲದ ವಾಂತಿ ಎಂದು ತಿಳಿದಾಗ ನಿಜಕ್ಕೂ ಆಕೆಗೆ ಒಂದು ಕ್ಷಣ ಶಾಕ್​ ಆದರೂ ಮರುಕ್ಷಣ ಸಂತಸ ವ್ಯಕ್ತಪಡಿಸಿದ್ದಾಳೆ.

12 ಇಂಚು ಅಗಲ ಮತ್ತು 24 ಇಂಚು ಉದ್ದ ಸುಮಾರು 15 ಎಲ್​ಬಿ ತೂಕವಿರುವ ತಿಮಿಂಗಿಲ ವಾಂತಿಯು 186,500 ಪೌಂಡ್ (1,88,49,792 ರೂ.)​ ಬೆಲೆ ಬಾಳುತ್ತದೆ. ಸಿಕ್ಕಿ ಇರುವ ವಸ್ತುವಿನ ಬಗ್ಗೆ ಖಚಿತಪಡಿಸಿಕೊಳ್ಳಲು ಇದೀಗ ಪರಿಣಿತರಿಗಾಗಿ ನಿಯಾಮ್ರಿನ್ ಕಾದು ಕುಳಿತಿದ್ದಾರೆ.

ತಿಮಿಂಗಿಲ ವಾಂತಿಗೆ ಅಷ್ಟೊಂದು ಬೇಡಿಕೆನಾ?

ಹೌದು, ಚಾನೆಲ್​ ನಂ. 5 ನಂತಹ ವಿಶ್ವದಲ್ಲೇ ದುಬಾರಿ ಮತ್ತು ಐಷಾರಾಮಿ ಸುಗಂಧ ದ್ರವ್ಯಗಳನ್ನು ತಯಾರಿಸಲು ಬೇಕಾದ ಅಗತ್ಯ ಪದಾರ್ಥಗಳು ತಿಮಿಂಗಿಲದ ವಾಂತಿಯಲ್ಲಿದೆಯಂತೆ. ಹೀಗಾಗಿ ಅದಕ್ಕೆ ತುಂಬಾ ಬೇಡಿಕೆ ಇದ್ದು, ಮಹಿಳೆಯ ಅದೃಷ್ಟವೇ ಕುಲಾಯಿಸಿದಂತಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net