ಹಿಂದೂ ವಿದ್ಯಾರ್ಥಿನಿಯರು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ವಿಡಿಯೋ ಮಾಡಿದ್ದಿದ್ರೆ ನೀವೇನ್ ಮಾಡ್ತಿದ್ರಿ?: ರವಿಕುಮಾರ್

Priyank Kharge Ravikumar
Published on

ಯಾದಗಿರಿ: ಉಡುಪಿ ಕಾಲೇಜು ಹಾಸ್ಟೆಲ್​ನ ಟಾಯ್ಲೆಟ್​ನಲ್ಲಿ ವಿಡಿಯೋ ಮಾಡಿದ್ದ ಪ್ರಕರಣ ಸಂಬಂಧ ರಾಜಕೀಯ ವಾಗ್ದಾಳಿ, ಆರೋಪ-ಪ್ರತ್ಯಾರೋಪಗಳು ಮುಂದುವರಿದಿದ್ದು, ಇಂದು ಅದು ಮತ್ತೊಂದು ಮಜಲಿಗೆ ತಲುಪಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ರವಿಕುಮಾರ್ ಪ್ರಿಯಾಂಕ್ ಖರ್ಗೆಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.

ಯಾದಗಿರಿಯಲ್ಲಿ ಇಂದು ಮಾತನಾಡಿದ ರವಿಕುಮಾರ್, ಪ್ರಿಯಾಂಕ್​ ಖರ್ಗೆ ಬಹಳ ಬುದ್ಧಿವಂತರು. ಅವರಿಗೆ ಪ್ರೂಫ್​ ಏನಿದೆ ಅಂತ ನಾನು ಹೇಳುತ್ತೇನೆ ಎಂದರು. ಕಳೆದ ಒಂದು ವರ್ಷದಿಂದ ನಡೀತಾ ಇದೆ ಅಂತ ವಿದ್ಯಾರ್ಥಿನಿಯರು ಹೇಳಿದ್ದಾರೆ. ತಪ್ಪಾಗಿದೆ ಅಂತ ಆರೋಪಿಗಳು ಕಾಲೇಜ್ ಮ್ಯಾನೇಜ್‌ಮೆಂಟ್​ಗೆ ಪತ್ರ ಬರೆದಿದ್ದಾರೆ, ಇದಕ್ಕಿಂತ ಪ್ರೂಫ್​ ಏನು ಬೇಕು ಪ್ರಿಯಾಂಕ್ ಖರ್ಗೆಗೆ ಎಂದು ಪ್ರಶ್ನಿಸಿದ್ದಾರೆ.

ಅದೇ ಹಿಂದೂ ವಿದ್ಯಾರ್ಥಿನಿಯರೇ ಮೂವರು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ವಿಡಿಯೋ ಮಾಡಿದ್ದಿದ್ರೆ ನೀವೇನ್ ಮಾಡ್ತಿದ್ರಿ? ಇಷ್ಟೊಂದು ತುಷ್ಟೀಕರಣ ರಾಜಕಾರಣ ಮಾಡೋದಾ? ಇಷ್ಟೊಂದು ಮತ ಬ್ಯಾಂಕ್ ಓಲೈಕೆ ಮಾಡೋದಾ? ಮಹಿಳೆಯರ ಸುರಕ್ಷತೆ ಬಲಿ ಕೊಟ್ಟು ರಾಜಕಾರಣ ಮಾಡುವುದಾದರೆ ನಿಮ್ಮ ರಾಜಕಾರಣ ರಾಜ್ಯಕ್ಕೆ ಅವಶ್ಯಕತೆ ಇಲ್ಲ ಎಂದು ರವಿಕುಮಾರ್ ಹೇಳಿದರು. ಹಣ ಮತ್ತು ಹೆಣದ ಮೇಲೆ ಕಾಂಗ್ರೆಸ್​ ರಾಜಕಾರಣ ಮಾಡುತ್ತಿದೆ, ಎರಡೇ ತಿಂಗಳಲ್ಲಿ ಕಾಂಗ್ರೆಸ್​ಗೆ ಹಣದ ಅಮಲು ಬಂದಿದೆ ಎಂದೂ ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net