ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

vaccine
Published on

ನವದೆಹಲಿ: ಕರೊನಾದ ವಿರುದ್ಧ ಜಯ ಸಾಧಿಸಲು ಲಸಿಕೆಯೊಂದೇ ಪ್ರಮುಖ ಹಾಗೂ ಪ್ರಬಲ ಅಸ್ತ್ರ ಎಂಬುದನ್ನು ಈಗಾಗಲೇ ಸರ್ಕಾರವೂ ಸೇರಿ ಹಲವರು ಪ್ರತಿಪಾದಿಸುತ್ತಿದ್ದಾರೆ. ಎರಡು ಡೋಸ್​ ಲಸಿಕೆ ಪಡೆದರೆ ಕೋವಿಡ್-19 ವಿರುದ್ಧದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಸೋಂಕಿನಿಂದಾಗಿ ಸಾಯುವ ಸಾಧ್ಯತೆಯೂ ತೀರಾ ಕಡಿಮೆ ಎಂದೂ ಹೇಳಲಾಗುತ್ತಿದೆ. ಆದರೆ ಎರಡೂ ಡೋಸ್​ ಲಸಿಕೆ ಪಡೆದ ಮೇಲೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು ಎಂಬುದನ್ನು ಈಗ ಅಧ್ಯಯನವೊಂದು ಪ್ರತಿಪಾದಿಸಿದೆ.

ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ. ಪಾಲ್​ ಈ ಕುರಿತ ಮಾಹಿತಿಯನ್ನು ಶುಕ್ರವಾರ ಬಹಿರಂಗಪಡಿಸಿದ್ದಾರೆ. ಪಂಜಾಬ್ ಸರ್ಕಾರದ ಸಹಯೋಗದಲ್ಲಿ ಚಂಡೀಗಢದ ಪೋಸ್ಟ್ ಗ್ರಾಜ್ಯುವೇಟ್​ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್ ಎಜುಕೇಷನ್ ಆ್ಯಂಡ್ ರಿಸರ್ಚ್ ಇಂಥದ್ದೊಂದು ಅಧ್ಯಯನವೊಂದನ್ನು ನಡೆಸಿದ್ದಾಗಿ ಅವರು ತಿಳಿಸಿದ್ದಾರೆ.

ಲಸಿಕೆ ಪಡೆಯದ 4,868 ಪೊಲೀಸರು ಸೋಂಕಿಗೆ ಒಳಗಾಗಿದ್ದು, ಅವರಲ್ಲಿ 15 ಮಂದಿ ಸಾವಿಗೀಡಾಗಿದ್ದರು. ಅಂದರೆ ಸಾವಿರಕ್ಕೆ 3.08 ಸಾವು ಸಂಭವಿಸಿದಂತಾಗಿದೆ. ಇನ್ನು 35,856 ಸೋಂಕಿತ ಪೊಲೀಸರಲ್ಲಿ ಅವರೆಲ್ಲೂ ಅದಾಗಲೇ ಮೊದಲ ಡೋಸ್ ಲಸಿಕೆ ಪಡೆದಿದ್ದು, ಆ ಪೈಕಿ 9 ಮಂದಿ ಸಾವಿಗೀಡಾಗಿದ್ದರು. ಅರ್ಥಾತ್​ ಸಾವಿರಕ್ಕೆ 0.25 ಸಾವು ಸಂಭವಿಸಿದಂತಾಗಿದೆ. ಇನ್ನೊಂದು ವಿಭಾಗದಲ್ಲಿ 42,720 ಪೊಲೀಸರು ಅದಾಗಲೇ ಎರಡೂ ಡೋಸ್ ಲಸಿಕೆ ಪಡೆದಿದ್ದು, ಆ ಪೈಕಿ ಇಬ್ಬರಷ್ಟೇ ಮೃತಪಟ್ಟಿದ್ದರು. ಅಂದರೆ ಸಾವಿರಕ್ಕೆ 0.05 ಸಾವಷ್ಟೇ ಸಂಭವಿಸಿದೆ ಎಂದು ಪೌಲ್ ವಿವರಿಸಿದ್ದಾರೆ.

ಇನ್ನು ಈ ಅಧ್ಯಯನ ಕುರಿತು ಮತ್ತಷ್ಟು ವಿವರಣೆ ನೀಡಿರುವ ಅವರು, ಪೊಲೀಸರು ಹೆಚ್ಚಿನ ರಿಸ್ಕ್ ಎದುರಿಸುತ್ತಿರುವುದರಿಂದ ಅವರನ್ನು ಈ ಅಧ್ಯಯನಕ್ಕೆ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಯಾರೇ ಆಗಲಿ ಮೊದಲ ಡೋಸ್ ಲಸಿಕೆ ಪಡೆದೂ ಸೋಂಕಿಗೆ ಒಳಗಾದರೆ ಅಂಥವರು ಸೋಂಕಿನಿಂದಾಗಿ ಸಾಯುವ ಸಾಧ್ಯತೆ ಕಡಿಮೆ ಇರುತ್ತದೆ. ಅಂದರೆ ಕೋವಿಡ್​ನಿಂದಾಗಿ ಸಂಭವಿಸುವ ಸಾವಿನ ವಿರುದ್ಧ ಶೇ. 92 ಸುರಕ್ಷೆ ಸಿಗುತ್ತದೆ. ಒಂದು ವೇಳೆ ಎರಡೂ ಡೋಸ್ ಲಸಿಕೆ ಪಡೆದೂ ಸೋಂಕಿಗೆ ಒಳಗಾಗಿದ್ದರೆ ಅಂಥವರು ಕೋವಿಡ್​ನಿಂದಾಗಿ ಸಂಭವಿಸುವ ಸಾವಿನ ವಿರುದ್ಧ ಶೇ. 98 ರಕ್ಷಣೆ ಹೊಂದಿರುತ್ತಾರೆ ಎಂದು ಪೌಲ್ ವಿವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net