

ನವದೆಹಲಿ: ಭಾರತೀಯ ಮೂಲದ ನಾಸಾದ ಖ್ಯಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ತಮ್ಮ ಸುದೀರ್ಘ ಬಾಹ್ಯಾಕಾಶ ಯಾನದ ಮೂಲಕ ಗಮನ ಸೆಳೆದಿದ್ದಾರೆ. ಬೋಯಿಂಗ್ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯ ಸಮಸ್ಯೆಗಳಿಂದಾಗಿ, ಹಿಂದಿರುಗುವ ದಿನಾಂಕವನ್ನು ಜೂನ್‌ವರೆಗೆ ವಿಸ್ತರಿಸಲಾಗಿದೆ. ಇದರಿಂದ ಸುನಿತಾ ವಿಲಿಯಮ್ಸ್ ಅಪಾಯಕ್ಕೆ ಸಿಲುಕುವ ಭೀತಿ ಎದುರಾಗಿದ್ದು, ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ನಾವೀಗ ಸುನಿತಾ ವಿಲಿಯಮ್ಸ್ ಅವರ ವೃತ್ತಿಪರ ಇತಿಹಾಸ, ಶಾಲಾ ಹಿನ್ನೆಲೆ, ವೈಯಕ್ತಿಕ ಜೀವನ ಮತ್ತು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ತಿಳಿಯೋಣ. ಸುನಿತಾ ಅವರು ಈಗಾಗಲೇ ಅನೇಕ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದಾರೆ. ಅವರೊಬ್ಬ ಫ್ಲೈಟ್ ಇಂಜಿನಿಯರ್. ತನ್ನ ಎರಡು ಕಾರ್ಯಾಚರಣೆಗಳಲ್ಲಿ ಒಟ್ಟು 322 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ದಾಖಲೆ ಬರೆದಿದ್ದಾರೆ.
ಸುನಿತಾ ವಿಲಿಯಮ್ಸ್ ತಂದೆಯ ಹೆಸರು ದೀಪಕ್ ಪಾಂಡ್ಯ. ಅವರು ನರರೋಗಶಾಸ್ತ್ರಜ್ಞರು. ತಾಯಿಯ ಹೆಸರು ಬೋನಿ ಪಾಂಡ್ಯ. ಸುನಿತಾ ಅವರು ವರ್ಷಕ್ಕೆ ಸುಮಾರು 1 ಕೋಟಿಗೂ ಅಧಿಕ ಸಂಬಳ ಪಡೆಯುತ್ತಾರೆ. ನಾಸಾ 2024ರಲ್ಲಿ ಗಗನಯಾನಿಗಳಿಗೆ ನೀಡಿದ ಸಂಬಳದ ಮೊತ್ತವನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಅದರ ಪ್ರಕಾರ ಸುನೀತಾ ವಿಲಿಯಮ್ಸ್ ಅವರಿಗೆ ಈ ವರ್ಷದಲ್ಲಿ 1 ಲಕ್ಷದ 52 ಸಾವಿರದ 258 ಡಾಲರ್‌ಗಳನ್ನು ಸಂಬಳವಾಗಿ ನೀಡಲಾಗಿದೆ. ಈ ಮೊತ್ತವು ಅತ್ಯಂತ ಕಷ್ಟಕರವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ತರಬೇತಿಯನ್ನು ಪೂರ್ಣಗೊಳಿಸುವುದಕ್ಕಾಗಿ ಅವರ ಬಹುಮಾನವಾಗಿ ಪ್ರತಿನಿಧಿಸುತ್ತದೆ. ಈ ಸಂಬಳದ ಜೊತೆಗೆ ಪಿಂಚಣಿ, ವಿಮೆ ಹಾಗೂ ಚಿಕಿತ್ಸೆ ಸೇರಿದಂತೆ ಅನೇಕ ಸೌಲಭ್ಯಗಳು ಸಹ ಉಚಿತವಾಗಿ ಸಿಗುತ್ತವೆ.
ಸುನಿತಾ ವಿಲಿಯಮ್ಸ್ ಅವರು 1983ರಲ್ಲಿ ನೀಧಮ್ ಹೈಸ್ಕೂಲ್‌ನಿಂದ ಪದವಿ ಪೂರ್ಣಗೊಳಿಸಿದರು. 1987ರಲ್ಲಿ ಯುನೈಟೆಡ್ ಸ್ಟೇಟ್ಸ್ ನೇವಲ್ ಅಕಾಡೆಮಿಯಿಂದ ಭೌತಿಕ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಮುಗಿಸಿದರು. 1995 ರಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಅನ್ನು ಪೂರ್ಣಗೊಳಿಸಿದರು. ಇದೀಗ ನಾಸಾದಲ್ಲಿ ಗಗನಯಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಹ್ಯಾಕಾಶದಲ್ಲೇ ಸಿಲುಕಿದ ಸುನಿತಾ
ಬೋಯಿಂಗ್ ಸ್ಟಾರ್ಲೈನರ್ ಸ್ಪೇಸ್ ಕ್ಯಾಪ್ಸುಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಕಾರಣ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ದಲ್ಲಿರುವ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಭೂಮಿಗೆ ಆಗಮಿಸುವುದು ವಿಳಂಬವಾಗಲಿದೆ. ಇದರ ಪರಿಣಾಮ ಗಗನಯಾತ್ರಿಗಳು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಆರಂಭದಲ್ಲಿ ಗಗನಯಾತ್ರಿಗಳ ಕಾರ್ಯಾಚರಣೆ ಕೇವಲ 8 ದಿನಗಳವರೆಗೆ ಮಾತ್ರ ಇರಲಿದೆ ಎನ್ನಲಾಗಿತ್ತು. ಆದರೆ, ಸ್ಟಾರ್ಲೈನರ್ ಸ್ಪೇಸ್ ಕ್ಯಾಪ್ಸುಲ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ಅಂದರೆ, 2025ರ ಫೆಬ್ರವರಿಯಲ್ಲಿ ಬೋಯಿಂಗ್ ಸ್ಟಾರ್ಲೈನರ್ (Boeing’s Starliner) ಬದಲಾಗಿ ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ (SpaceX’s Crew Dragon) ಸ್ಪೇಸ್ ಕ್ಯಾಪ್ಸುಲ್ನಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ ಎಂದು ನಾಸಾ (NASA) ತಿಳಿಸಿದೆ. (ಏಜೆನ್ಸೀಸ್)