ಫುಟ್​ಬಾಲ್​ ಆಡುವಾಗ ಎದೆನೋವು! ಮಂಜುಮ್ಮೇಲ್​ ಬಾಯ್ಸ್​ ಚಿತ್ರದ ಸಹಾಯಕ ನಿರ್ದೇಶಕ ನಿಧನ

Anil Xavier
Published on

ತಿರುವನಂತಪುರಂ: ಭಾರತದಾದ್ಯಂತ ಭಾರಿ ಸದ್ದು ಮಾಡಿದ ಮಲಯಾಳಂನ ಮಂಜುಮ್ಮೇಲ್​ ಬಾಯ್ಸ್ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅನಿಲ್​ ಕ್ಸೇವಿಯರ್​ (39) ಮಂಗಳವಾರ (ಆ.27) ಕೊನೆಯುಸಿರೆಳೆದಿದ್ದಾರೆ.

ಅಂಗಮಾಲಿಯಲ್ಲಿ ಫುಟ್​ಬಾಲ್​ ಆಡುವಾಗ ಅನಿಲ್​ ಅವರಿಗೆ ತೀವ್ರ ಎದೆನೋವು ಕಾಣಿಕೊಂಡಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಕಾರ್ಡಿಯಾಕ್​ ಅರೆಸ್ಟ್​ನಿಂದ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಅನಿಲ್​ ಅವರು ಜಾನ್​ ಇ ಮಾನ್​, ತಲ್ಲುಮಲ ಮತ್ತು ಥೇಕ್ಕು ವಡಕ್ಕು ಸೇರಿದಂತೆ ಕೆಲ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ವರ್ಷದ ಫೆಬ್ರವರಿ 22ರಂದು ತೆರೆಕಂಡ ಸೂಪರ್​ ಹಿಟ್​ ಮಂಜುಮ್ಮೇಲ್​ ಬಾಯ್ಸ್ ಸಿನಿಮಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅನಿಲ್ ಮತ್ತು ಅವರ ಪತ್ನಿ ಅನುಪಮಾ ಇಲಿಯಾಸ್ ಅಂಗಮಾಲಿಯಲ್ಲಿ ಕಲಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು.

ತ್ರಿಪುನಿಥುರಾದ ಆರ್‌ಎಲ್‌ವಿ ಕಾಲೇಜಿನಲ್ಲಿ ಬಿಎಫ್‌ಎ ಮುಗಿಸಿದ ನಂತರ, ಅನಿಲ್ ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಶಿಲ್ಪಕಲೆಯಲ್ಲಿ ಎಂಎಫ್‌ಎ ಮಾಡಿದರು. ಕ್ಯಾಂಪಸ್‌ನಲ್ಲಿ ಅವರ ಸಹೋದ್ಯೋಗಿ ರೋಹಿತ್ ವೇಮುಲಾ ಅವರ ಸ್ಮಾರಕ ಶಿಲ್ಪವನ್ನು ರಚಿಸುವ ಮೂಲಕ ಅನಿಲ್ ಹೆಸರುವಾಸಿಯಾಗಿದ್ದರು.

ಸಹೋದರ ಅಜೀಶ್ ಕ್ಸೇವಿಯರ್ ಮಾತನಾಡಿ, ಅನಿಲ್​ ಮೃತ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ನೀಡಬೇಕೆಂಬ ಅನಿಲ್ ಅವರ ಆಸೆ ಈಡೇರಲಿದೆ ಎಂದು ತಿಳಿಸಿದ್ದಾರೆ. ಬುಧವಾರ (ಆ.28) ಬೆಳಗ್ಗೆ 11ರಿಂದ ನಿವಾಸದಲ್ಲಿ ಹಾಗೂ ಮಧ್ಯಾಹ್ನ 3ರವರೆಗೆ ನಾಸ್ ಆಡಿಟೋರಿಯಂನಲ್ಲಿ ಸಾರ್ವಜನಿಕ ದರ್ಶನವಿರುತ್ತದೆ. ಆನಂತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮಂಜುಮ್ಮೇಲ್​ ಬಾಯ್ಸ್ ಅಂತಹ ಸಣ್ಣ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಈ ಸಿನಿಮಾ ಮಾಲಿವುಡ್ ಸಿನಿಪ್ರಿಯರನ್ನಷ್ಟೇ ಅಲ್ಲ ಕಾಲಿವುಡ್, ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್ ಇಂಡಸ್ಟ್ರಿಯನ್ನೂ ತನ್ನತ್ತ ಸೆಳೆಯಿತು. ನಾಯಕಿ, ಹಾಡುಗಳಿಲ್ಲದಿದ್ದರೂ ಸಿನಿಮಾ ಹಿಟ್ ಆಗಬಹುದು ಎಂಬುದನ್ನು ಈ ಸರ್ವೈವಲ್ ಥ್ರಿಲ್ಲರ್ ಸಿನಿಮಾ ಸಾಬೀತು ಮಾಡಿದೆ. ಕೇವಲ 20 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ ಸಿನಿಮಾ ಬರೋಬ್ಬರಿ 250 ಕೋಟಿ ರೂ. ಕಲೆಕ್ಷನ್ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net