

ನವದೆಹಲಿ: ಬೋಯಿಂಗ್ ಸ್ಟಾರ್ಲೈನರ್ ಸ್ಪೇಸ್ ಕ್ಯಾಪ್ಸುಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಕಾರಣ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ದಲ್ಲಿರುವ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಭೂಮಿಗೆ ಆಗಮಿಸುವುದು ವಿಳಂಬವಾಗಲಿದ್ದು, ಇದರ ಪರಿಣಾಮ ಗಗನಯಾತ್ರಿಗಳು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.
ಆರಂಭದಲ್ಲಿ ಗಗನಯಾತ್ರಿಗಳ ಕಾರ್ಯಾಚರಣೆ ಕೆಲವೇ ದಿನಗಳವರೆಗೆ ಮಾತ್ರ ಇರಲಿದೆ ಎನ್ನಲಾಗಿತ್ತು. ಆದರೆ, ಸ್ಟಾರ್ಲೈನರ್ ಸ್ಪೇಸ್ ಕ್ಯಾಪ್ಸುಲ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ಅಂದರೆ, 2025ರ ಫೆಬ್ರವರಿಯಲ್ಲಿ ಬೋಯಿಂಗ್ ಸ್ಟಾರ್ಲೈನರ್ (Boeing’s Starliner) ಬದಲಾಗಿ ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ (SpaceX’s Crew Dragon) ಸ್ಪೇಸ್ ಕ್ಯಾಪ್ಸುಲ್ನಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ ಎಂದು ನಾಸಾ (NASA) ತಿಳಿಸಿದೆ.
ಆದರೆ, ಈ ಅನಿರೀಕ್ಷಿತ ವಿಳಂಬದಿಂದಾಗಿ ಸುನಿತಾ ವಿಲಿಯಮ್ಸ್ ಸೇರಿದಂತೆ ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮ ಹಾಗೂ ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳ ಪರಿಣಾಮಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಬಾಹ್ಯಾಕಾಶ ಪ್ರಯಾಣಕ್ಕೆ ಸಂಬಂಧಿಸಿದ ಅಪಾಯಗಳಲ್ಲಿ ಸಾಮಾನ್ಯವಾಗಿ ತೂಕವಿಲ್ಲದಿರುವಿಕೆ ಮತ್ತು ವಿಕಿರಣವನ್ನು ಚರ್ಚಿಸಲಾಗುತ್ತಿದೆ. ಆದರೆ, ಆಮ್ಲಜನಕದ ಕೊರತೆಯಿಂದ ಉಂಟಾಗುವ ಮೆದುಳಿನ ಹಾನಿಯ ಬಗ್ಗೆ ಹೆಚ್ಚು ಚರ್ಚೆಯಾಗುವುದೇ ಇಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಹ್ಯಾಕಾಶದ ವಾತಾವರಣವೇ ತುಂಬಾ ವಿಭಿನ್ನ. ಈ ವಾತಾವರಣದಲ್ಲಿ ಒತ್ತಡದ ಅನುಪಸ್ಥಿತಿ ಇರುತ್ತದೆ ಮತ್ತು ವಿಪರೀತ ನಿರ್ವಾತ ಪರಿಸ್ಥಿತಿ ಇರುತ್ತದೆ. ಹೀಗಾಗಿ ಎಚ್ಚರಿಕೆಯ ನಡೆ ಅತ್ಯಗತ್ಯ. ಗಗನಯಾತ್ರಿಗಳ ಉಳಿವಿಗಾಗಿ ಅಗತ್ಯವಾದ ಆಮ್ಲಜನಕ ಮಟ್ಟ ಸೇರಿದಂತೆ ನಿಯಂತ್ರಿತ ವಾತಾವರಣವನ್ನು ಒದಗಿಸಲು ಬಾಹ್ಯಾಕಾಶ ನೌಕೆಯಂತಹ ವ್ಯವಸ್ಥೆಗಳನ್ನು ಅಂಬಿಸಿರುತ್ತಾರೆ. ಈ ವ್ಯವಸ್ಥೆಯಲ್ಲಿ ಯಾವುದೇ ಸಣ್ಣ ವೈಫಲ್ಯ ಕಾಣಿಸಿಕೊಂಡರು ಗಂಭೀರ ಆರೋಗ್ಯ ಪರಿಣಾಮಗಳಿಗೆ ಕಾರಣವಾಗಬಹುದು. ಅಲ್ಲದೆ, ಸಾವು ಸಂಭವಿಸುವ ಸಾಧ್ಯತೆಯೂ ಇದೆ.
ಬಾಹ್ಯಾಕಾಶದಲ್ಲಿರುವ ವಿಶಿಷ್ಟ ಪರಿಸರವು ದೇಹದಲ್ಲಿ ದ್ರವದ ಬದಲಾವಣೆಗಳಿಗೆ ಕಾರಣವಾಗುತ್ತದೆ. ದೇಹದೊಳಗಿನ ದ್ರವಗಳು ಮೇಲಿನ ದೇಹದ ಮೇಲ್ಭಾಗಕ್ಕೆ ಮರುಹಂಚಿಕೆಯಾಗುತ್ತವೆ. ಇದರಿಂದ ಇಂಟ್ರಾಕ್ರೇನಿಯಲ್ ಒತ್ತಡ ಹೆಚ್ಚಾಗಬಹುದು. ಹೀಗಾದಲ್ಲಿ ತಲೆನೋವು, ದೃಷ್ಟಿಹೀನತೆ ಮತ್ತು ಮೆದುಳು ಹಾನಿಯಾಗಬಹುದು. ಅಲ್ಲದೆ, ಬಾಹ್ಯಾಕಾಶದಲ್ಲಿ ಕಾಸ್ಮಿಕ್ ವಿಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಡಿಎನ್ಎಗೂ ಹಾನಿಯಾಗಬಹುದು. ಇದರಿಂದ ಕ್ಯಾನ್ಸರ್ ಸೇರಿದಂತೆ ಇತರೆ ನರವೈಜ್ಞಾನಿಕ ಪರಿಸ್ಥಿತಿಗಳು ಸಹ ಎದುರಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಸದ್ಯ ನಾಸಾ ಬಾಹ್ಯಾಕಾಶ ನೌಕೆಯಲ್ಲಿನ ರೇಡಿಯೇಷನ್ ಮಟ್ಟವನ್ನು ಮಾನಿಟರ್ ಮಾಡುತ್ತಿದೆ. ಆದರೆ, ಸುನಿತಾ ವಿಲಿಯಮ್ಸ್ ಆಗಮನ ವಿಳಂಬವಾದಷ್ಟು ಮೆದುಳಿನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು ಮೆದುಳು ಕಾರ್ಯಕ್ಕೆ ಆಮ್ಲಜನಕ ತುಂಬಾನೇ ಮುಖ್ಯ. ಆಮ್ಲಜನಕದ ಮಟ್ಟದಲ್ಲಿನ ಬದಲಾವಣೆಗಳಿಗೆ ಮೆದುಳು ಹೆಚ್ಚು ಸಂವೇದನಾಶೀಲವಾಗಿರುತ್ತದೆ ಮತ್ತು ಅಲ್ಪಾವಧಿಯ ಕೊರತೆಯು ಸಹ ಆಳವಾದ ಪರಿಣಾಮಗಳನ್ನು ಬೀರುತ್ತದೆ. ಕೆಲವೇ ನಿಮಿಷಗಳ ಆಮ್ಲಜನಕ ಕೊರತೆಯು ಮೆದುಳು ಕೋಶಗಳ ಸಾವಿಗೆ ಕಾರಣವಾಗಬಹುದು. ಬಾಹ್ಯಾಕಾಶ ಪ್ರಯಾಣದ ಸಂದರ್ಭದಲ್ಲಿ, ಗಗನಯಾತ್ರಿಗಳಿಗೆ ಲೈಫ್ ಸಪೋರ್ಟಿಂಗ್ ಸಿಸ್ಟಮ್ ಮೂಲಕ ಆಮ್ಲಜನಕವನ್ನು ನಿರಂತರವಾಗಿ ಪೂರೈಸಲಾಗುತ್ತದೆ. ಆದಾಗ್ಯೂ, ಈ ವ್ಯವಸ್ಥೆಯು ವಿಫಲವಾದಲ್ಲಿ ಅಥವಾ ಆಮ್ಲಜನಕದ ಕೊರತೆಗೆ ಕಾರಣವಾಗುವ ತುರ್ತುಸ್ಥಿತಿ ಎದುರಾದರೆ, ಅದರಿಂದಾಗುವ ಅಪಾಯಗಳು ಮಾತ್ರ ಗಮನಾರ್ಹವಾಗಿವೆ.
ಇನ್ನು ಸುನೀತಾ ಅವರು ಸದ್ಯಕ್ಕೆ ಭೂಮಿಗೆ ಬರುವುದಿಲ್ಲ. ಈ ವಿಳಂಬದಿಂದಾಗಿ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್ಡಿ) ಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.
ಬೋಯಿಂಗ್ ಸ್ಟಾರ್ಲೈನರ್ಗೆ ಏನಾಯಿತು?
ಥಸ್ಟರ್ ವಿಫಲ ಮತ್ತು ಹೀಲಿಯಂ ಸೋರಿಕೆಯಂತಹ ಸಮಸ್ಯೆಗಳನ್ನು ಒಳಗೊಂಡಂತೆ ಸದ್ಯಕ್ಕೆ ಬೋಯಿಂಗ್ ಸ್ಟಾರ್ಲೈನರ್ ಕ್ಯಾಪ್ಸುಲ್ನಲ್ಲಿ ಕಾಣಿಸಿಕೊಂಡಿರುವ ತೊಂದರೆಗಳನ್ನು ನಿವಾರಿಸಲು ಬೋಯಿಂಗ್ ನಿರಂತರವಾಗಿ ಪರಿಶೀಲನೆ ನಡೆಸುತ್ತಿದೆ. ಇತ್ತೀಚಿಗೆ ಬಂದ ಪರೀಕ್ಷೆಯ ಡೇಟಾ ಪ್ರಕಾರ ಕ್ಯಾಪ್ಸುಲ್ನಲ್ಲಿನ ಥ್ರಸ್ಟರ್ಗಳ ಮಿತಿಮೀರಿದ ಶಾಖವು ಟೆಫ್ಲಾನ್ ಸೀಲ್ಗಳ ತಿರುಚಿಗೆ ಕಾರಣವಾಗಿದೆ ಮತ್ತು ಪ್ರೊಪೆಲ್ಲಂಟ್ ಹರಿವನ್ನು ನಿರ್ಬಂಧಿಸಿದ್ದು, ಒತ್ತಡವನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ಸ್ಟಾರ್ಲೈನರ್ ಕ್ಯಾಪ್ಸುಲ್ ಹಿಂದಿರುಗುವಿಕೆಯಿಂದಾಗುವ ಅಪಾಯಗಳನ್ನು ಒಪ್ಪಿಕೊಳ್ಳಬೇಕೆ ಅಥವಾ ಅದರ ಬದಲು ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ನಂತಹ ಸುರಕ್ಷಿತ ಪರ್ಯಾಯವನ್ನು ಆರಿಸಿಕೊಳ್ಳಬೇಕೆ ಎಂಬುದರ ಕುರಿತು ನಾಸಾದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ.
ಒಂದು ವೇಳೆ ನಾಸಾ, ಸ್ಟಾರ್ಲೈನರ್ನ ಕಾರ್ಯಾಚರಣೆಯನ್ನು ಬದಲಾಯಿಸಲು ನಿರ್ಧರಿಸಿದರೆ, ಬೋಯಿಂಗ್ ಕ್ಯಾಪ್ಸುಲ್ ಅನ್ನು ಸಿಬ್ಬಂದಿಯಿಲ್ಲದೆ ವಾಪಸ್ ಭೂಮಿ ಕರೆತರಲು ಕಾನ್ಫಿಗರ್ ಮಾಡಲಿದೆ. ಅಲ್ಲದೆ, ಇದು ಬೋಯಿಂಗ್ಗೆ ಹಿನ್ನಡೆಯಾಗಲಿದೆ. ನಿರ್ವಹಣೆಯ ಸಮಸ್ಯೆಗಳು ಮತ್ತು ಇಂಜಿನಿಯರಿಂಗ್ ಸಮಸ್ಯೆಗಳನ್ನು ಒಳಗೊಂಡಂತೆ ಸ್ಟಾರ್ಲೈನರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸ್ಟಾರ್ಲೈನರ್ ಕ್ಯಾಪ್ಸುಲ್ ಅಭಿವೃದ್ಧಿ ಪಡಿಸಲು ಪ್ರಸ್ತುತ ಪರೀಕ್ಷಾ ಕಾರ್ಯಾಚರಣೆಗಾಗಿ 125 ಮಿಲಿಯನ್ ಡಾಲರ್ ಸೇರಿದಂತೆ ಬೋಯಿಂಗ್ಗೆ 2016 ರಿಂದ 1.6 ಶತಕೋಟಿ ಡಾಲರ್ ವೆಚ್ಚವಾಗಿದೆ.
ವಿಲ್ಮೋರ್ ಮತ್ತು ವಿಲಿಯಮ್ಸ್ಗಾಗಿ ಮುಂಬರುವ ಕ್ರೂ ಡ್ರ್ಯಾಗನ್ ಉಡಾವಣೆಯಲ್ಲಿ ಎರಡು ಸ್ಥಾನಗಳನ್ನು ಖಾಲಿ ಬಿಡಲು ನಾಸಾ ಸ್ಪೇಸ್ಎಕ್ಸ್ನೊಂದಿಗೆ ಸಂಭಾವ್ಯ ಯೋಜನೆಗಳನ್ನು ಚರ್ಚಿಸುತ್ತಿದೆ. 2025ರ ಆರಂಭದಲ್ಲಿ ಗಗನಯಾತ್ರಿಗಳನ್ನು ಭೂಮಿಗೆ ಮರಳಿ ತರಲು 2024ರ ಸೆಪ್ಟೆಂಬರ್ನಲ್ಲಿ ಉಡಾವಣೆ ಮಾಡಲು ನಿಗದಿಪಡಿಸಲಾದ ಸ್ಪೇಸ್ಎಕ್ಸ್ನ ಕ್ರ್ಯೂ-9 ಮಿಷನ್ ಅನ್ನು ಬಳಸುವುದನ್ನು ಈ ಯೋಜನೆ ಒಳಗೊಂಡಿದೆ. ಸ್ಟಾರ್ಲೈನರ್ ಕ್ಯಾಪ್ಸುಲ್ ಅನ್ನು ಐಎಸ್ಎಸ್ಗೆ ಗರಿಷ್ಠ 90 ರಿಂದ 63 ದಿನಗಳವರೆಗೆ ಡಾಕ್ ಮಾಡಲಾಗಿದೆ. ಮುಂಬರುವ ಕಾರ್ಯಾಚರಣೆಗಾಗಿ ಕ್ರ್ಯೂ ಡ್ರ್ಯಾಗನ್ ಬಳಸಬೇಕಾದ ಅದೇ ಪೋರ್ಟ್ ಅನ್ನು ಸ್ಟಾರ್ಲೈನರ್ ಆಕ್ರಮಿಸಿಕೊಂಡಿದ್ದು, ಈ ಯೋಜನೆಗಳನ್ನು ಸರಿಹೊಂದಿಸಲು ನಾಸಾ ಈಗಾಗಲೇ ಸ್ಪೇಸ್ಎಕ್ಸ್ನ ಕ್ರ್ಯೂ-9 ಮಿಷನ್ ಅನ್ನು ಒಂದು ತಿಂಗಳಿಗಿಂತ ಹೆಚ್ಚು ಕಾಲ ವಿಳಂಬಗೊಳಿಸಿದೆ. (ಏಜೆನ್ಸೀಸ್)