ನನ್ನ ಜೀವನದ ರಿಯಲ್​ ಗೇಮ್​ ಇದು! ವಿರಾಟ್​ ಕೊಹ್ಲಿ ಕಷ್ಟಗಳನ್ನು ಎದುರಿಸಿದ್ದು ಹೀಗಂತೆ…

Virat Kohli
Published on

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರು. ಬ್ಯಾಟಿಂಗ್​ನಲ್ಲಿ ಅವರ ಸ್ಥಿರತೆ, ಮೈದಾನದಲ್ಲಿ ಅವರ ಆಕ್ರಮಣಕಾರಿ ಶೈಲಿ ಮತ್ತು ಎಲ್ಲ ಸ್ವರೂಪಗಳಲ್ಲಿ ಅವರ ನಾಯಕತ್ವದ ಗುಣಗಳು ಕ್ರಿಕೆಟ್‌ ಲೋಕದಲ್ಲಿ ಅಳಿಸಲಾಗದ ಗುರುತಾಗಿ ಉಳಿದಿವೆ. ಕೊಹ್ಲಿ ಅವರಲ್ಲಿರುವ ಆಟದ ಬಗೆಗಿನ ಉತ್ಸಾಹ ಮತ್ತು ಸಮರ್ಪಣೆ ಅವರನ್ನು ಕ್ರಿಕೆಟ್‌ನಲ್ಲಿ ಅತ್ಯುನ್ನತ ಎತ್ತರಕ್ಕೆ ಕೊಂಡೊಯ್ದಿದೆ.

ಕೊಹ್ಲಿ 2013 ರಿಂದ 2022 ರವರೆಗೆ ಎಲ್ಲ ಸ್ವರೂಪಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿದರು. ಅವರ ನಾಯಕತ್ವದಲ್ಲಿ ಭಾರತವು ಹಲವಾರು ಪ್ರಮುಖ ಪಂದ್ಯಾವಳಿಗಳಲ್ಲಿ ಫೈನಲ್‌ಗೆ ತಲುಪಿತು ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಬಲ ಶಕ್ತಿಯಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70ಕ್ಕೂ ಹೆಚ್ಚು ಶತಕಗಳನ್ನು ಬಾರಿಸಿರುವ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದಾರೆ. ಕೊಹ್ಲಿ ಅವರು 8,000, 9,000, 10,000, ಮತ್ತು 11,000 ಏಕದಿನ ರನ್‌ಗಳನ್ನು ವೇಗವಾಗಿ ಪೂರೈಸಿದ್ದು ಸೇರಿದಂತೆ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ಮುರಿದಿರುವ ವಿರಾಟ್ ಕೊಹ್ಲಿಗೆ ಒಂದು ಹಂತದಲ್ಲಿ ಭಾರಿ ಸಂಕಷ್ಟ ಎದುರಾಗಿತ್ತು. ಮೂರು ವರ್ಷಗಳಿಂದ ಯಾವುದೇ ಮಾದರಿಯಲ್ಲಿ ಶತಕ ಬಾರಿಸಿರಲಿಲ್ಲ. ತದನಂತರ ಪುಟಿದೇಳಿದರು. ಗೆಲ್ಲುವುದು ಮಾತ್ರವಲ್ಲ, ಕಷ್ಟದ ಸಂದರ್ಭದಲ್ಲಿ ಶಾಂತವಾಗಿರುವುದು ಬಹಳ ಮುಖ್ಯ ಎನ್ನುತ್ತಾರೆ ವಿರಾಟ್​ ಕೊಹ್ಲಿ.

ವಿರಾಟ್​ ಕೊಹ್ಲಿ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಜೀವನದ ಬಹುಮುಖ್ಯ ಸಂದೇಶವನ್ನು ತಿಳಿಸಿದ್ದಾರೆ. ವೈಯಕ್ತಿಕ ಜೀವನ ಅಥವಾ ವೃತ್ತಿ ಜೀವನ ಶ್ರೇಷ್ಠವಾಗಿಲ್ಲದಿರುವ ಸಮಯದಲ್ಲಿ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಅವುಗಳನ್ನು ಎದುರಿಸಿ ಮುಂದೆ ಸಾಗುವುದು ಹೇಗೆ? ಹೇಳಬೇಕೆಂದರೆ ಈ ವಿಷಯಗಳು ಬಹಳ ಸೂಕ್ಷ್ಮವಾಗಿರುತ್ತವೆ. ಯಾವುದೇ ಫಲಿತಾಂಶಗಳು ನಮ್ಮ ಪರವಾಗಿ ಇಲ್ಲದಿದ್ದಾಗ ನಾವು ಏನನ್ನೂ ಮಾಡಲಾಗುವುದಿಲ್ಲ. ಅಂದರೆ, ಯಾವುದಕ್ಕೂ ಆಸಕ್ತಿ ಇರುವುದಿಲ್ಲ. ಅಭ್ಯಾಸ ಮಾಡಲು ಹಾಗೂ ಜಿಮ್‌ನಲ್ಲಿ ವ್ಯಾಯಾಮ ಮಾಡಲು ಸಹ ಆಸಕ್ತಿಯೇ ಇರುವುದಿಲ್ಲ.

ಆದರೆ ನೀವು ಒಬ್ಬ ವ್ಯಕ್ತಿಯಂತೆ ಜೀವನದ ಎಲ್ಲ ಹಂತಗಳನ್ನು ಗೌರವಿಸಬೇಕು. ನಿಮ್ಮ ಕೆಟ್ಟ ಸಮಯದಲ್ಲೂ ಸಹ ನೀವು ಕಠಿಣ ಕೆಲಸವನ್ನು ಮಾಡಲು ಬದ್ಧರಾಗಿರಬೇಕು. ಯಾವುದೇ ಕೆಲಸವು ಯಶಸ್ಸಿನ ಮೇಲೆ ಆಧಾರವಾಗಿರಬಾರದು. ಕಷ್ಟದ ಸಂದರ್ಭಗಳಲ್ಲಿಯೂ ಸಹ ಶಾಂತವಾಗಿರಬೇಕು. ಆದರೆ, ಕಠಿಣ ಸಂದರ್ಭದಲ್ಲಿಯೂ ಶಾಂತವಾಗಿರುವುದು ಸುಲಭವಲ್ಲ. ಹೀಗಾಗಿ ಈ ಹಂತ ನನ್ನ ಜೀವನದಲ್ಲೇ ರಿಯಲ್​ ಗೇಮ್​ ಆಗಿದೆ. ಏಕೆಂದರೆ ಅದು ಅಂತಿಮವಾಗಿ ದೇವರ ಪರೀಕ್ಷೆಯಾಗಿದೆ. ನೀವು ಪರೀಕ್ಷೆಗೆ ಸಿದ್ಧರಿಲ್ಲದಿದ್ದರೆ, ಉನ್ನತ ಮಟ್ಟದಲ್ಲಿ ಕಷ್ಟಪಟ್ಟು ಕೆಲಸ ಮಾಡದಿದ್ದರೆ ಬಂದ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಕೊಹ್ಲಿ ಹೇಳಿದರು.

ಅಂದಹಾಗೆ ವಿರಾಟ್ ಕೊಹ್ಲಿ 2020, 2021, 2022 ರಲ್ಲಿ ಭಾರಿ ವಿಫಲರಾದರು. ಸುಮಾರು ಮೂರು ವರ್ಷಗಳ ಕಾಲ ಯಾವುದೇ ಸ್ವರೂಪದಲ್ಲಿ ಶತಕ ಬಾರಿಸಲಿಲ್ಲ. ಅರ್ಧಶತಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೂ ಶತಕ ಸಿಡಿಸದೇ ಇರುವುದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಅವರು ಅಂತಿಮವಾಗಿ 2022ರ ಟಿ20 ವಿಶ್ವಕಪ್‌ನಲ್ಲಿ ಶತಕ ಗಳಿಸಿದರು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. 2023ರ ಏಕದಿನ ವಿಶ್ವಕಪ್‌ನಲ್ಲಿ ಟಾಪ್ ಸ್ಕೋರರ್ ಆದರು. 2024ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಅವರು ಅದ್ಭುತ ಅರ್ಧಶತಕ ಗಳಿಸಿದ್ದರು. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಆಡಿದ ವಿರಾಟ್ ಸದ್ಯ ಲಂಡನ್​ನಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗಾಗಿ ಅವರು ಮುಂದಿನ ತಿಂಗಳು ತವರಿಗೆ ಮರಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net