

ನವದೆಹಲಿ: ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ದಲ್ಲಿರುವ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಭೂಮಿಗೆ ಬರುವುದು ಸದ್ಯಕ್ಕೆ ವಿಳಂಬವಾಗಲಿದೆ. ಮುಂದಿನ ವರ್ಷ ಅಂದರೆ, 2025ರ ಫೆಬ್ರವರಿಯಲ್ಲಿ ಬೋಯಿಂಗ್ ಸ್ಟಾರ್ಲೈನರ್ (Boeing's Starliner) ಬದಲಾಗಿ ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ (SpaceX's Crew Dragon) ಸ್ಪೇಸ್ ಕ್ಯಾಪ್ಸುಲ್ನಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ ಎಂದು ನಾಸಾ (NASA)ತಿಳಿಸಿದೆ.
ಸ್ಟಾರ್ಲೈನರ್ ಸ್ಪೇಸ್ ಕ್ಯಾಪ್ಸುಲ್ನ ಸುರಕ್ಷತಾ ಮೌಲ್ಯಮಾಪನದ ವೇಳೆ ಸಾಕಷ್ಟು ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಸಾ ಈ ನಿರ್ಧಾರವನ್ನು ಪ್ರಕಟಿಸಿದೆ. ಕಳೆದ ಜೂನ್ ತಿಂಗಳಲ್ಲಿ ಬೋಯಿಂಗ್ ಸ್ಟಾರ್ಲೈನರ್ ಕ್ಯಾಪ್ಸುಲ್ ಮೂಲಕ ಇಬ್ಬರು ಗಗನಯಾತ್ರಿಗಳನ್ನು ಐಎಸ್ಎಸ್ಗೆ ಕಳುಹಿಸಲಾಯಿತು. ಇದು ಬೋಯಿಂಗ್ ಸ್ಟಾರ್‌ಲೈನರ್‌ನ ಮೊದಲ ಸಿಬ್ಬಂದಿ ಕಾರ್ಯಾಚರಣೆಯಾಗಿದೆ.
ಆರಂಭದಲ್ಲಿ ಗಗನಯಾತ್ರಿಗಳ ಕಾರ್ಯಾಚರಣೆ ಕೇವಲ 8 ದಿನಗಳವರೆಗೆ ಮಾತ್ರ ಇರಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸ್ಟಾರ್ಲೈನರ್ನಲ್ಲಿರುವ ಪ್ರೊಪಲ್ಶನ್ ಸಿಸ್ಟಮ್ನಲ್ಲಿನ ತೊಂದರೆಯ ಕಾರಣದಿಂದಾಗಿ ಕಾರ್ಯಾಚರಣೆ ಅವಧಿಯನ್ನು ವಿಸ್ತರಿಸಲಾಯಿತು. ಕ್ಯಾಪ್ಸುಲ್ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡ ಬಳಿಕ ಮೊದಲೇ ಪ್ಲಾನ್ ಮಾಡಿದಂತೆ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸುವ ಬಾಹ್ಯಾಕಾಶ ನೌಕೆಯ ಸಾಮರ್ಥ್ಯದ ಬಗ್ಗೆ ಇದೀಗ ಕಳವಳವನ್ನು ಹೆಚ್ಚಿಸಿವೆ.
ಥಸ್ಟರ್ ವಿಫಲ ಮತ್ತು ಹೀಲಿಯಂ ಸೋರಿಕೆಯಂತಹ ಸಮಸ್ಯೆಗಳನ್ನು ಒಳಗೊಂಡಂತೆ ಸದ್ಯಕ್ಕೆ ಕ್ಯಾಪ್ಸುಲ್ನಲ್ಲಿ ಕಾಣಿಸಿಕೊಂಡಿರುವ ತೊಂದರೆಗಳನ್ನು ನಿವಾರಿಸಲು ಬೋಯಿಂಗ್ ನಿರಂತರವಾಗಿ ಪರಿಶೀಲನೆ ನಡೆಸುತ್ತಿದೆ. ಇತ್ತೀಚಿಗೆ ಬಂದ ಪರೀಕ್ಷೆಯ ಡೇಟಾ ಪ್ರಕಾರ ಕ್ಯಾಪ್ಸುಲ್ನಲ್ಲಿನ ಥ್ರಸ್ಟರ್‌ಗಳ ಮಿತಿಮೀರಿದ ಶಾಖವು ಟೆಫ್ಲಾನ್ ಸೀಲ್‌ಗಳ ತಿರುಚಿಗೆ ಕಾರಣವಾಗಿದೆ ಮತ್ತು ಪ್ರೊಪೆಲ್ಲಂಟ್ ಹರಿವನ್ನು ನಿರ್ಬಂಧಿಸಿದ್ದು, ಒತ್ತಡವನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ಸ್ಟಾರ್‌ಲೈನರ್ ಕ್ಯಾಪ್ಸುಲ್ ಹಿಂದಿರುಗುವಿಕೆಯಿಂದಾಗುವ ಅಪಾಯಗಳನ್ನು ಒಪ್ಪಿಕೊಳ್ಳಬೇಕೆ ಅಥವಾ ಅದರ ಬದಲು ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ನಂತಹ ಸುರಕ್ಷಿತ ಪರ್ಯಾಯವನ್ನು ಆರಿಸಿಕೊಳ್ಳಬೇಕೆ ಎಂಬುದರ ಕುರಿತು ನಾಸಾದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ನಾಸಾ, ಸ್ಟಾರ್‌ಲೈನರ್‌ನ ಕಾರ್ಯಾಚರಣೆಯನ್ನು ಬದಲಾಯಿಸಲು ನಿರ್ಧರಿಸಿದರೆ, ಬೋಯಿಂಗ್ ಕ್ಯಾಪ್ಸುಲ್ ಅನ್ನು ಸಿಬ್ಬಂದಿಯಿಲ್ಲದೆ ವಾಪಸ್ ಭೂಮಿ ಕರೆತರಲು ಕಾನ್ಫಿಗರ್ ಮಾಡಲಿದೆ. ಅಲ್ಲದೆ, ಇದು ಬೋಯಿಂಗ್‌ಗೆ ಹಿನ್ನಡೆಯಾಗಲಿದೆ. ನಿರ್ವಹಣೆಯ ಸಮಸ್ಯೆಗಳು ಮತ್ತು ಇಂಜಿನಿಯರಿಂಗ್ ಸಮಸ್ಯೆಗಳನ್ನು ಒಳಗೊಂಡಂತೆ ಸ್ಟಾರ್ಲೈನರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸ್ಟಾರ್‌ಲೈನರ್ ಕ್ಯಾಪ್ಸುಲ್ ಅಭಿವೃದ್ಧಿ ಪಡಿಸಲು ಪ್ರಸ್ತುತ ಪರೀಕ್ಷಾ ಕಾರ್ಯಾಚರಣೆಗಾಗಿ 125 ಮಿಲಿಯನ್ ಡಾಲರ್ ಸೇರಿದಂತೆ ಬೋಯಿಂಗ್‌ಗೆ 2016 ರಿಂದ 1.6 ಶತಕೋಟಿ ಡಾಲರ್ ವೆಚ್ಚವಾಗಿದೆ.
ವಿಲ್ಮೋರ್ ಮತ್ತು ವಿಲಿಯಮ್ಸ್‌ಗಾಗಿ ಮುಂಬರುವ ಕ್ರೂ ಡ್ರ್ಯಾಗನ್ ಉಡಾವಣೆಯಲ್ಲಿ ಎರಡು ಸ್ಥಾನಗಳನ್ನು ಖಾಲಿ ಬಿಡಲು ನಾಸಾ ಸ್ಪೇಸ್‌ಎಕ್ಸ್‌ನೊಂದಿಗೆ ಸಂಭಾವ್ಯ ಯೋಜನೆಗಳನ್ನು ಚರ್ಚಿಸುತ್ತಿದೆ. 2025ರ ಆರಂಭದಲ್ಲಿ ಗಗನಯಾತ್ರಿಗಳನ್ನು ಭೂಮಿಗೆ ಮರಳಿ ತರಲು 2024ರ ಸೆಪ್ಟೆಂಬರ್ನಲ್ಲಿ ಉಡಾವಣೆ ಮಾಡಲು ನಿಗದಿಪಡಿಸಲಾದ ಸ್ಪೇಸ್‌ಎಕ್ಸ್‌ನ ಕ್ರ್ಯೂ-9 ಮಿಷನ್ ಅನ್ನು ಬಳಸುವುದನ್ನು ಈ ಯೋಜನೆ ಒಳಗೊಂಡಿರುತ್ತದೆ. ಸ್ಟಾರ್ಲೈನರ್ ಕ್ಯಾಪ್ಸುಲ್ ಅನ್ನು ಐಎಸ್ಎಸ್ಗೆ ಗರಿಷ್ಠ 90 ರಿಂದ 63 ದಿನಗಳವರೆಗೆ ಡಾಕ್ ಮಾಡಲಾಗಿದೆ. ಮುಂಬರುವ ಕಾರ್ಯಾಚರಣೆಗಾಗಿ ಕ್ರ್ಯೂ ಡ್ರ್ಯಾಗನ್ ಬಳಸಬೇಕಾದ ಅದೇ ಪೋರ್ಟ್ ಅನ್ನು ಸ್ಟಾರ್ಲೈನರ್ ಆಕ್ರಮಿಸಿಕೊಂಡಿದ್ದು, ಈ ಯೋಜನೆಗಳನ್ನು ಸರಿಹೊಂದಿಸಲು ನಾಸಾ ಈಗಾಗಲೇ ಸ್ಪೇಸ್‌ಎಕ್ಸ್‌ನ ಕ್ರ್ಯೂ-9 ಮಿಷನ್ ಅನ್ನು ಒಂದು ತಿಂಗಳಿಗಿಂತ ಹೆಚ್ಚು ವಿಳಂಬಗೊಳಿಸಿದೆ.
ಸದ್ಯಕ್ಕೆ ನಾಸಾದ ಸಿಬ್ಬಂದಿ ಸ್ಟಾರ್‌ಲೈನರ್ ಕ್ಯಾಪ್ಸುಲ್ ಮೇಲ್ವಿಚಾರಣೆ ನಡೆಸುತ್ತಿದ್ದು, ಹೆಚ್ಚುವರಿ ಪರೀಕ್ಷೆಯನ್ನು ನಡೆಸಲು ಮತ್ತು ಹೆಚ್ಚಿನ ಡೇಟಾವನ್ನು ಸಂಗ್ರಹಿಸಲು ಹೆಚ್ಚಿನ ಸಮಯ ಬೇಕಾಗಿದೆ. ಸ್ಟಾರ್‌ಲೈನರ್ ಅಥವಾ ಕ್ರೂ ಡ್ರ್ಯಾಗನ್ ಅನ್ನು ಬಳಸಬೇಕೆ ಎಂಬ ನಿರ್ಧಾರವನ್ನು ಮುಂದಿನ ವಾರದಲ್ಲಿ ನಾಸಾ ತೆಗೆದುಕೊಳ್ಳಲಿದೆ. ಹೀಗಾಗಿ ವಿಲ್ಮೋರ್ ಮತ್ತು ವಿಲಿಯಮ್ಸ್ ಭೂಮಿಗೆ ಬರುವುದು ವಿಳಂಬವಾಗಲಿದೆ. (ಏಜೆನ್ಸೀಸ್)