

Shobha Shetty : ನಟಿ ಶೋಭಾ ಶೆಟ್ಟಿ ಕನ್ನಡ ಮತ್ತು ತೆಲುಗು ಧಾರಾವಾಹಿಗಳಿಂದ ಮನೆ ಮಾತಾದರು. ಕನ್ನಡದಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅವರ ನಟನೆ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ತಿಕ ದೀಪಂ ಹೆಸರಿನ ತೆಲುಗು ಧಾರಾವಾಹಿಯಲ್ಲಿ ಮೋನಿತಾ ಎಂಬ ನೆಗಿಟಿವ್ ಪಾತ್ರದ ಮೂಲಕ ಅಲ್ಲೂ ಜನಪ್ರಿಯತೆ ಗಳಿಸಿದರು.
ಇದೇ ಖ್ಯಾತಿಯಿಂದ ಶೋಭಾ ಅವರು ತೆಲುಗು ಬಿಗ್ಬಾಸ್ ಸೀಸನ್ 7ರಲ್ಲಿ ಭಾಗವಹಿಸಿದರು. ತುಂಬಾ ದಿನಗಳವರೆಗೆ ಶೋನಲ್ಲಿ ಉಳಿದಿದ್ದ ಶೋಭಾ ಎಲ್ಲರಿಗೂ ಕಠಿಣ ಪೈಪೋಟಿ ನೀಡಿದರು. ಒಂದು ಹಂತದಲ್ಲಿ ಶೋಭಾ ಅವರು ಫೈನಲ್ಗೆ ಹೋಗಿ ಗೆದ್ದೇ ಗೆಲ್ಲುತ್ತಾರೆ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಯಿತು. ಆದರೆ, 98 ದಿನ ದೊಡ್ಮನೆಯಲ್ಲಿ ಇದ್ದ ಶೋಭಾ ಫೈನಲ್ ಹೊಸ್ತಿಲಲ್ಲಿ ಶೋನಿಂದ ಹೊರಬಿದ್ದರು. ಇದಾದ ಬಳಿಕ ಕನ್ನಡ ಬಿಗ್ಬಾಸ್ ಸೀಸನ್ 11 ರಲ್ಲಿಯೂ ಶೋಭಾ ಭಾಗವಹಿಸಿದರು.
ಕನ್ನಡ ಬಿಗ್ಬಾಸ್ ಸೀಸನ್ ಸಮಯದಲ್ಲಿ ನಿರೂಪಕ ಕಿಚ್ಚ ಸುದೀಪ್ ಜೊತೆ ಶೋಭಾ ಶೆಟ್ಟಿ ಜಗಳವಾಡಿದ್ದರು. ಶೋ ಸಮಯದಲ್ಲಿ ಇದು ಭಾರೀ ಚರ್ಚೆ ಕೂಡ ಆಗಿತ್ತು. ಇದೇ ವಿಚಾರವಾಗಿ ಇತ್ತೀಚಿಗೆ ತೆಲುಗಿನ ಬಿಗ್ ಟಿವಿ ಪ್ಲಸ್ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಶೋಭಾ ಅವರು ಸ್ಪಷ್ಟನೆ ನೀಡಿದ್ದಾರೆ.
ಕನ್ನಡ ಬಿಗ್ಬಾಸ್ನಲ್ಲಿ ಸ್ಪರ್ಧಿಸುವ ಅವಕಾಶ ಬಂದಾಗ, ಅಷ್ಟರಲ್ಲಾಗಲೇ ತೆಲುಗು ಬಿಗ್ಬಾಸ್ನಲ್ಲಿ ಭಾಗವಹಿಸಿದ್ದರಿಂದ ನಾನದನ್ನು ಒಪ್ಪಿಕೊಳ್ಳಲಿಲ್ಲ. ನಂತರ, ಅವರು ನನ್ನನ್ನು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬರುವಂತೆ ಕೇಳಿದರು. ಇದರ ಮಧ್ಯೆ ನನಗೆ ಕನ್ನಡದಲ್ಲಿ ಆಫರ್‌ಗಳು ಕಡಿಮೆಯಾಗಿದ್ದವು ಮತ್ತು ನಾನು ಬಿಡುವಿದ್ದೆ. ಈ ಕಾರಣಕ್ಕೆ ಒಪ್ಪಿಕೊಳ್ಳುವುದು ಉತ್ತಮ ಎನಿಸಿತು. ಬಿಗ್ಬಾಸ್ ಮನೆಗೆ ಹೋದ ಎರಡು ವಾರಗಳ ನಂತರ, ನನಗೆ ಆರೋಗ್ಯ ಸಮಸ್ಯೆಗಳಿದ್ದವು. ಇದರಿಂದ ನನನ್ನು ನಾನೇ ಎಲಿಮಿನೇಟ್ ಮಾಡಿಕೊಂಡು ಹೊರಬಂದೆ ಎಂದರು.
ಮಾತು ಮುಂದುವರಿಸಿದ ಶೋಭಾ, ಅಷ್ಟೊಂದು ದೊಡ್ಡ ಕಾರ್ಯಕ್ರಮಕ್ಕೆ ಹೋಗ್ತೀರ ಅಂದ್ರೆ ಅಲ್ಲಿ ಸಾಕಷ್ಟು ಒಪ್ಪಂದ, ನೀತಿ-ನಿಯಮಗಳಿರುತ್ತವೆ. ನೀವು ಸುಲಭವಾಗಿ ಹೋಗಿ, ನಿಮ್ಮಿಷ್ಟದಂತೆ ವಾಪಸ್ ಬರಲು ಸಾಧ್ಯವಿಲ್ಲ. ಸುದೀಪ್ ಸರ್ ನನ್ನ ಮೇಲೆ ಯಾಕೆ ಅಷ್ಟೊಂದು ಕೋಪ ಮಾಡಿಕೊಂಡರು ಅಂದರೆ, ನಾನು ತುಂಬಾ ದಿನಗಳ ಬಳಿಕ ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದೆ. ಆ ಸಮಯದಲ್ಲಿ ನನಗೆ ಜನರು ಸಾಕಷ್ಟು ಮತಗಳು ಕೂಡ ಹಾಕಿದ್ದರು. ನಾನು ಟಾಪ್ 2ರಲ್ಲಿ ಇದ್ದೆ. ಅಂದು ಎಲಿಮಿನೇಷನ್ನಿಂದ ಬಚಾವ್ ಆದ ಎರಡನೇ ವ್ಯಕ್ತಿ ನಾನೇ ಆಗಿದ್ದೆ. ತುಂಬಾ ದಿನಗಳ ಬಳಿಕ ಕಂಬ್ಯಾಕ್ ಮಾಡಿದಾಗ ಜನರು ಅಷ್ಟೊಂದು ಬೆಂಬಲ ನೀಡಿದರು ಕೂಡ ಸ್ವಯಂ ಎಲಿಮಿನೇಟ್ ಮಾಡಿಕೊಂಡಿದ್ದು, ಜನರ ಮತಗಳಿಗೆ ಅಗೌರವ ತೋರಿದಂತೆ ಎಂದು ಸುದೀಪ್ ಸರ್ ಟೀಕಿಸಿ, ಸ್ವಲ್ಪ ಗರಂ ಆದರು ಎಂದು ಶೋಭಾ ಹೇಳಿದರು.
ಸುದೀಪ್ ಸರ್ ಹೇಳಿದ್ದು ಸರಿ. ಆದರೆ, ನನಗೆ ನನ್ನ ಆರೋಗ್ಯ ಮುಖ್ಯವಾಗಿತ್ತು. ಹಣ ಮತ್ತು ಖ್ಯಾತಿ ನನಗೆ ಮುಖ್ಯವಲ್ಲ, ನನ್ನ ಆರೋಗ್ಯ ಎಲ್ಲದಕ್ಕಿಂತ ಮುಖ್ಯ. ನನಗೆ ಬೇಡ ಅನಿಸಿದಾಗ ನಾನು ಹೊರಬಂದೆ. ಬಿಗ್ಬಾಸ್ ತಂಡ ಕೂಡ ನನ್ನೊಂದಿಗೆ ಮಾತನಾಡಿರು ಆದರೆ, ನಾನು ಒಪ್ಪಲಿಲ್ಲ. ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಶಾಲಿಯಲ್ಲ. ಅಲ್ಲಿ ಆಡಲು, ನೀವು ಬಲಶಾಲಿಯಾಗಿರಬೇಕು. ಆದರೆ ನನಗೆ ನನ್ನ ಸಮಸ್ಯೆಗಳಿವೆ. ಅದಕ್ಕಾಗಿಯೇ ನಾನು ಸುದೀಪ್ ಸರ್ ಜೊತೆ ಈ ಕಾರ್ಯಕ್ರಮದಿಂದ ಹೊರಹೋಗಲು ಜಗಳವಾಡಿದ್ದೆ. ಹೊರಬಂದ ನಂತರ, ನನಗೆ ಇದರ ಬಗ್ಗೆ ತುಂಬಾ ಬೇಸರವಾಯಿತು. ನಂತರ ಯಶವಂತ್ (ಭಾವಿ ಪತಿ) ನನಗೆ ಧೈರ್ಯ ತುಂಬಿದರು ಎಂದು ಶೋಭಾ ತಿಳಿಸಿದರು. (ಏಜೆನ್ಸೀಸ್)