ಎಲ್ಲ ಡಿಬಾಸ್​ ಅಭಿಮಾನಿಗಳಿಗೆ ಸ್ವಾಗತ... ದರ್ಶನ್​ ಫ್ಯಾನ್ಸ್​ಗೆ ನಟಿ ರಮ್ಯಾ ಖಡಕ್​ ತಿರುಗೇಟು! Actress Ramya

Actress Ramya
Published on

Actress Ramya : ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಹಾಗೂ ನಟ ದರ್ಶನ್​ ಅಭಿಮಾನಿಗಳ ನಡುವಿನ ವಾಗ್ವಾದ ಮುಂದುವರಿದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ರಮ್ಯಾ ಟ್ವೀಟ್​ ಮಾಡಿದ್ದರು. ಇದರ ಬೆನ್ನಲ್ಲೇ ದರ್ಶನ್​ ಅಭಿಮಾನಿಗಳು ರಮ್ಯಾ ವಿರುದ್ಧ ಕೆಟ್ಟದಾಗಿ ಕಾಮೆಂಟ್​ ಮಾಡಿದ್ದರು. ಇದೀಗ ಇನ್​​ಸ್ಟಾಗ್ರಾಂ ಸ್ಟೋರಿಯಲ್ಲಿ ನೇರವಾಗಿ ದಾಸನ ಅಭಿಮಾನಿಗಳಿಗೆ ಮೋಹಕ ತಾರೆ ಟಕ್ಕರ್​ ಕೊಟ್ಟಿದ್ದಾರೆ.

ಎಲ್ಲ ಡಿ ಬಾಸ್​ (ದರ್ಶನ್​) ಅಭಿಮಾನಿಗಳೇ ನನ್ನ ಇನ್​ಸ್ಟಾಗ್ರಾಂ ಖಾತೆಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎನ್ನುವುದಕ್ಕೆ ನಿಮ್ಮ ಕಾಮೆಂಟ್​ಗಳೇ ಸಾಕ್ಷಿ ಎಂದು ರಮ್ಯಾ ಅವರು ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್​ ಮಾಡಿದ್ದು, ಸದ್ಯ ಭಾರಿ ಸಂಚಲನ ಮೂಡಿಸಿದೆ. ಅಷ್ಟಕ್ಕೂ ರಮ್ಯಾ ಅವರು ಈ ರೀತಿ ಸ್ಟೋರಿ ಪೋಸ್ಟ್​ ಮಾಡುವುದಕ್ಕೆ ಕಾರಣ ಏನು ಅಂದರೆ, ಅನೇಕ ದರ್ಶನ್​ ಅಭಿಮಾನಿಗಳು ರಮ್ಯಾ ಅವರ ಇನ್​ಸ್ಟಾಗ್ರಾಂ ಪೋಸ್ಟ್​ಗಳಲ್ಲಿ ಕೆಟ್ಟದಾಗಿ ಕಾಮೆಂಟ್​ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ರಮ್ಯಾ ಈ ರೀತಿ ತಿರುಗೇಟು ನೀಡಿದ್ದಾರೆ.

Ramya 1

ಈ ಮುಂಚೆ ರಮ್ಯಾ ಏನು ಹೇಳಿದ್ದರು?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಹಾಗೂ ಗೆಳತಿ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೆ ನೀಡಿರುವ ಜಾಮೀನು ಪ್ರಶ್ನಿಸಿ (ಜಾಮೀನು ರದ್ದು ಕೋರಿ) ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಜುಲೈ 24ರಂದು ಎರಡೂ ಕಡೆಯ ವಾದನ್ನು ಆಲಿಸಿ, ತೀರ್ಪು ಕಾಯ್ದಿರಿಸಿದೆ. ಗಮನಾರ್ಹ ಸಂಗತಿ ಏನೆಂದರೆ, ದರ್ಶನ್​ಗೆ ಜಾಮೀನು ನೀಡಿರುವ ಹೈಕೋರ್ಟ್​ ಕ್ರಮವನ್ನು ಸುಪ್ರೀಂಕೋರ್ಟ್​ ಟೀಕಿಸಿದೆ. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್​ ಹೇಳಿಕೆಗಳನ್ನು ಉಲ್ಲೇಖಿಸಿ ಲೈವ್​ ಲಾ ಸುದ್ದಿ ಮಾಧ್ಯಮ ಮಾಡಿರುವ ವರದಿಯ ಸ್ಕ್ರೀನ್​ಶಾಟ್​ ಅನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡ ನಟಿ ರಮ್ಯಾ, ಭಾರತದ ಸಾಮಾನ್ಯ ಜನರಿಗೆ ಸುಪ್ರೀಂಕೋರ್ಟ್ ಒಂದು ಆಶಾಕಿರಣ. ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಬರೆದುಕೊಂಡಿದ್ದರು. ಹೀಗಾಗಿ ದರ್ಶನ್​ ಅಭಿಮಾನಿಗಳು ರಮ್ಯಾ ಅವರ ವಿರುದ್ಧ ಮುಗಿಬಿದ್ದಿದ್ದಾರೆ.

ಸುಪ್ರೀಂಕೋರ್ಟ್​ ಹೇಳಿದ್ದೇನು?

ನಟ ದರ್ಶನ್​ ಹಾಗೂ ಪವಿತ್ರಾ ಗೌಡಗೆ ಜಾಮೀನು ನೀಡಿದ ಕ್ರಮವನ್ನು ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಟೀಕಿಸಿದರು. ಹೈಕೋರ್ಟ್ ಆದೇಶವನ್ನು ನೀಡಿದ ರೀತಿ ತುಂಬಾ ವಿಷಾದವಿದೆ. ಇತರ ಪ್ರಕರಣಗಳಲ್ಲಿಯೂ ಹೈಕೋರ್ಟ್ ಅದೇ ರೀತಿಯ ಆದೇಶವನ್ನು ನಿರ್ದೇಶಿಸುತ್ತದೆಯೇ? ಕೊಲೆ ಪ್ರಕರಣಕ್ಕೆ ಬಂಧನದ ಆಧಾರಗಳನ್ನು ಒದಗಿಸಲಾಗಿಲ್ಲ ಎಂದು ಹೈಕೋರ್ಟ್​ ಹೇಳಿರುವುದು ತೊಂದರೆದಾಯಕವಾಗಿದೆ. ಇದು ಪ್ರಾಥಮಿಕವಾಗಿ, ನ್ಯಾಯಾಂಗ ಅಧಿಕಾರದ ದುರ್ಬಳಕೆಯಾಗಿದೆ. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಅಂತಹ ತಪ್ಪನ್ನು ಮಾಡುವುದು ಸ್ವೀಕಾರಾರ್ಹ ಆದರೆ, ಹೈಕೋರ್ಟ್ ನ್ಯಾಯಮೂರ್ತಿಗಳು ಈ ರೀತಿ ಮಾಡುವುದು ಸರಿಯೇ ಎಂದು ಅಸಮಾಧಾನ ಹೊರಹಾಕಿದರು. ಈ ತೀರ್ಪುನಲ್ಲಿ ಹೈಕೋರ್ಟ್​ ಮಾಡಿದ ತಪ್ಪನ್ನು ನಾವು ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್​ ಒತ್ತಿ ಹೇಳಿತು.

ಅಂದಹಾಗೆ, ಜುಲೈ 24ರಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ, ಸರ್ಕಾರ ಹಾಗೂ ದರ್ಶನ ಪರ ವಕೀಲರ ವಾದವನ್ನು ಆಲಿಸಿತು. ಬಳಿಕ ಎರಡೂ ಕಡೆಯ ವಕೀಲರಿಗೆ ಲಿಖಿತ ವಾದಾಂಶವನ್ನು ಸಲ್ಲಿಸಲು ಕೋರ್ಟ್​ ಒಂದು ವಾರಗಳ ಗಡುವು ನೀಡಿದ್ದು, ಆ ಬಳಿಕ ತೀರ್ಪು ಪ್ರಕಟಿಸಲಿದೆ. 3 ಪುಟದೊಳಗೆ ಲಿಖಿತ ವಾದ ಸಲ್ಲಿಸಲು ನ್ಯಾಯಾಲಯ ಹೇಳಿದೆ.

ಸರ್ಕಾರದ ಪರ ಸಿದ್ಧಾರ್ಥ್​ ಲೂತ್ರಾ ಹಾಗೂ ನಟ ದರ್ಶನ್​ ಪರ ಸಿದ್ಧಾರ್ಥ್​ ದವೆ ವಾದ ಮಂಡನೆ ಮಾಡಿದರು. ಸಾಕ್ಷಿಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆ, ದರ್ಶನ್​ ಹಾಗೂ ಪವಿತ್ರಾ ಗೌಡ ನಡುವಿನ ಸಂಬಂಧ ಹಾಗೂ ಕೊಲೆಗೆ ಕಾರಣವೇನು? ಮುಂತಾದ ವಿಚಾರಗಳ ಬಗ್ಗೆ ನ್ಯಾಯಾಲಯ ಪ್ರಶ್ನೆಗಳನ್ನು ಕೇಳಿತು. ಎರಡೂ ಕಡೆಯ ವಕೀಲರು ಪ್ರಬಲವಾಗಿ ವಾದ ಮಂಡನೆ ಮಾಡಿದ್ದು, ವಾದವನ್ನು ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಸುಮಾರು 10 ದಿನಗಳ ಬಳಿಕ ಕೋರ್ಟ್​ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಕೊಲೆ ಕೇಸ್​ನ ಆರೋಪಿಗಳಾದ ನಟ ದರ್ಶನ್​, ಪವಿತ್ರಗೌಡ, ಪ್ರದೂಶ್​, ಲಕ್ಷ್ಮಣ್​, ನಾಗರಾಜು ಹಾಗೂ ಅನುಕುಮಾರ್​ ಸೇರಿದಂತೆ 7 ಪ್ರಮುಖ ಆರೋಪಿಗಳಿಗೆ ಕಳೆದ(2024) ಡಿಸೆಂಬರ್​ 13ರಂದು ಕರ್ನಾಟಕ ಹೈಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರದ ಪರ ನಗರ ಪೊಲೀಸರು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಸುದೀರ್ಘ ವಾದ-ವಿವಾದ ಪರಿಶೀಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.

2024ರ ಜೂನ್​ 8ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯಾಗಿತ್ತು. ಈ ಹತ್ಯೆಯ ಕೇಸ್​ನಲ್ಲಿ ನಟ ದರ್ಶನ್​ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು. 6 ತಿಂಗಳ ಬಳಿಕ ಪ್ರಕರಣದ ಎಲ್ಲಾ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net