Ahmedabad Plane Crash : ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್‌ನಲ್ಲಿ ನಿನ್ನೆ (ಜೂನ್ 12) ಸಂಭವಿಸಿದೆ. ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ ಕೇವಲ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ.
ಭೀಕರ ವಿಮಾನ ಪತನದ ಮಧ್ಯೆ ಮಹಾಪವಾಡ ಎಂಬಂತೆ ಬದುಕುಳಿದ ವ್ಯಕ್ತಿಯ ಹೆಸರು ವಿಶ್ವಾಸ್ ಕುಮಾರ್ ರಮೇಶ್. ಅವರಿಗೆ 40 ವರ್ಷ ವಯಸ್ಸು. ವಿಮಾನದ 11A ಸೀಟಿನಲ್ಲಿ ಕುಳಿತಿದ್ದ ವಿಶ್ವಾಸ್ ಪವಾಡಸದೃಶವಾಗಿ ಬದುಕುಳಿದಿದ್ದಾರೆ. ವಿಶ್ವಾಸ್ ಓರ್ವ ಬ್ರಿಟಿಷ್ ಪ್ರಜೆ. ಕಳೆದ 20 ವರ್ಷಗಳಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಪತ್ನಿ ಮತ್ತು ಮಕ್ಕಳು ಸಹ ಲಂಡನ್‌ನಲ್ಲಿ ನೆಲೆಸಿದ್ದಾರೆ. ವಿಶ್ವಾಸ್ ಕೆಲವು ದಿನಗಳ ಹಿಂದೆ ಗುಜರಾತ್‌ನಲ್ಲಿರುವ ತಮ್ಮ ಕುಟುಂಬವನ್ನು ಭೇಟಿ ಮಾಡಲು ಬ್ರಿಟನ್‌ನಿಂದ ಬಂದಿದ್ದರು. ಹಿಂದಿರುಗುವ ವೇಳೆ ಈ ಅಪಘಾತ ಸಂಭವಿಸಿದೆ.
ಭೀಕರ ವಿಮಾನ ಅಪಘಾತದಿಂದ ಬದುಕುಳಿದ ವಿಶ್ವಾಸ್ ಕುಮಾರ್ ರಮೇಶ್, ಪತನದ ಸಮಯದಲ್ಲಿ ಏನಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ಒಂದು ದೊಡ್ಡ ಶಬ್ದ ಕೇಳಿಸಿತು. ತಕ್ಷಣವೇ ವಿಮಾನ ಅಪಘಾತಕ್ಕೀಡಾಯಿತು. ಇದೆಲ್ಲವೂ ಬಹಳ ಬೇಗನೆ ಸಂಭವಿಸಿತು. ಅಪಘಾತದ ನಂತರ ನಾನು ಎಚ್ಚರಗೊಂಡು ಕಣ್ಣುಗಳನ್ನು ತೆರೆದಾಗ ನನ್ನ ಸುತ್ತಲೂ ಶವಗಳು ಚದುರಿಹೋಗಿದ್ದವು. ನಾನು ಭಯಭೀತನಾಗಿ ಅಲ್ಲಿಂದ ಓಡಿಹೋದೆ. ವಿಮಾನದ ತುಣುಕುಗಳು ನನ್ನ ಸುತ್ತಲೂ ಹರಡಿಕೊಂಡಿದ್ದವು. ಆ ಸಮಯದಲ್ಲಿ, ಯಾರೋ ನನ್ನನ್ನು ಹಿಡಿದು ಆಂಬ್ಯುಲೆನ್ಸ್‌ನಲ್ಲಿ ಹಾಕಿದರು ಮತ್ತು ಆಸ್ಪತ್ರೆಗೆ ಕರೆದೊಯ್ದರು ಎಂದು ವಿಶ್ವಾಸ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ವಿಶ್ವಾಸ್ ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ. ಅವರು ಸ್ಥಳೀಯ ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶ್ವಾಸ್ ಅವರ ಸಹೋದರ ಕೂಡ ವಿಮಾನದಲ್ಲಿದ್ದರು. ಆದರೆ, ಅವರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಅವರನ್ನು ಹುಡುಕಿಕೊಡಿ ಎಂದು ವಿಶ್ವಾಸ್ ಪತನ ಬಳಿಕ ಮನವಿ ಮಾಡಿದರು. ಆದರೆ, ಅವರ ಸಹೋದರ ದುರಂತ ಸಾವಿಗೀಡಾಗಿದ್ದಾರೆ. ಇನ್ನು ಅಪಘಾತದ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಏರ್ ಇಂಡಿಯಾ ಘೋಷಿಸಿದೆ.
ಭಾರತದ ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾ ದುರಂತ
ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್‌ನಲ್ಲಿ ಸಂಭವಿಸಿದೆ. ಗುರುವಾರ (ಜೂನ್ 12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಬೇಕಿದೆ. ಈ ಹಿಂದೆ ಭಾರತದಲ್ಲಿ ಹಲವು ನಾಗರಿಕ ವಿಮಾನ ಪತನ ದುರಂತ ನಡೆದಿದ್ದವಾದರೂ ಈ ಪ್ರಮಾಣದ ಭೀಕರ ಅಪಘಾತ ಇದೇ ಮೊದಲು.
* ಎಲ್ಲಿ ದುರಂತ?: ಅಹಮದಾಬಾದ್ನ ಮೇಘಾನಿ ನಗರ
* ಎಷ್ಟೊತ್ತಿಗೆ?: ಗುರುವಾರ ಮಧ್ಯಾಹ್ನ 1.38
* ಯಾವ ವಿಮಾನ?: ಏರ್ ಇಂಡಿಯಾ ಎ1-171
* ಎಲ್ಲಿಗೆ ಹೊರಟಿತ್ತು?: ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣ
* ಪತನಕ್ಕೆ ಕಾರಣ?: ಪ್ರಾಥಮಿಕ ತನಿಖೆ ಪ್ರಕಾರ ಇಂಜಿನ್ನಲ್ಲಿ ತಾಂತ್ರಿಕ ದೋಷ
* 32 ಸೆಕೆಂಡ್: ಟೇಕ್ ಆಫ್ ಆದ 32 ಸೆಕೆಂಡ್ನಲ್ಲಿ ಪತನ
ವಿಮಾನದಲ್ಲಿದ್ದವರು ಯಾರು?
* 230 ಪ್ರಯಾಣಿಕರು, 12 ಸಿಬ್ಬಂದಿ
* 169-ಭಾರತೀಯರು
* 52 -ಬ್ರಿಟಿಷ್ ಪ್ರಜೆಗಳು
* 7- ಪೋರ್ಚುಗಲ್ ಪ್ರಜೆಗಳು
* 1-ಓರ್ವ ಕೆನಡಾ ನಾಗರಿಕ
ವಿಮಾನ ಪತನಕ್ಕೂ ಮುನ್ನವೇ ಪೈಲಟ್ ಮಾಡಿದ ಮೇಡೇ ಕರೆ ಎಂದರೇನು? ಕೊನೇ ಕ್ಷಣದಲ್ಲಿ ಏನಾಯ್ತು? Ahmedabad plane crash
ಏನಿದು ಬ್ಲ್ಯಾಕ್ ಬಾಕ್ಸ್!? ದುರಂತಕ್ಕೀಡಾದ ವಿಮಾನದಲ್ಲಿ ಇದು ಸಿಕ್ಕರೆ ಅಪಘಾತದ ಕಾರಣಗಳು ಬಹಿರಂಗ | Black Box
ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ಪತನಕ್ಕೆ ಈ ಅಂಶಗಳೇ ಕಾರಣ? ನಿಜವಾಗಿಯೂ ಏನಾಯ್ತು? Ahmedabad Plane Crash