

Black Box: ಇಂದು (ಜೂ.12) ಮಧ್ಯಾಹ್ನ 1:45ಕ್ಕೆ ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ AI-171 ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಭೀಕರ ಅಪಘಾತಕ್ಕೀಡಾಗಿದೆ. ಮೇಘ್ನಿಗರ್ನ ಘೇಡಾಸರ್ ಕ್ಯಾಂಪ್ ಪ್ರದೇಶದ ವಸತಿ ಪ್ರದೇಶದಲ್ಲಿದ್ದ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಡಿಕ್ಕಿಯಾಗಿದ್ದು, ದುರಂತದಲ್ಲಿ 242 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ಡ್ರೀಮ್ಲೈನರ್ AI-171 ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆದ ಕೆಲವೇ ನಿಮಿಷಗಳಲ್ಲಿ ಬೆಂಕಿಗೆ ಆಹುತಿಯಾಗಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಡಿಜಿಸಿಎ ಪ್ರಕಾರ, ಬೋಯಿಂಗ್ 787 ವಿಮಾನವು ರನ್ವೇ 23ರಿಂದ ಮಧ್ಯಾಹ್ನ 1.39ಕ್ಕೆ ಹೊರಟಿತು ಎಂದು ದೃಢಪಡಿಸಲಾಗಿದೆ. ಹೊರಟ ಕೆಲವೇ ಕ್ಷಣಗಳಲ್ಲಿ 'ಮೇಡೇ' ಸಂದೇಶ ಹೊರಬಿದ್ದಿದೆ. ಇದಾದ ಬೆನ್ನಲ್ಲೇ ವಿಮಾನ ವಾಯು ಸಂಚಾರ ನಿಯಂತ್ರಣದ ಸಂಪರ್ಕಕ್ಕೆ ಸಿಕ್ಕಿಲ್ಲ. ಏರ್ಪೋರ್ಟ್ನ ಸ್ವಲ್ಪ ದೂರದಲ್ಲೇ ಈ ಅನುಹುತ ಸಂಭವಿಸಿದ್ದು, ವಿಮಾನದಲ್ಲಿನ ಬ್ಲ್ಯಾಕ್ ಬಾಕ್ಸ್ ಅಪಘಾತಕ್ಕೆ ಕಾರಣವೇನು ಎಂಬುದನ್ನು ಬಹಿರಂಗಪಡಿಸುತ್ತವೆ.
ಪ್ರತಿಯೊಂದು ವಿಮಾನದಲ್ಲಿ ಈ ಬ್ಲ್ಯಾಕ್ ಬಾಕ್ಸ್ ಇದ್ದೇ ಇರುತ್ತದೆ. ಯಾವ ಕಾರಣಕ್ಕೆ ಇದನ್ನು ಅಳವಡಿಸಿರುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ. ಈ ಒಂದು ಬ್ಲ್ಯಾಕ್ ಬಾಕ್ಸ್ ವಿಮಾನ ಅಪಘಾತಕ್ಕೀಡಾಗಿದ್ದು ಹೇಗೆ? ಯಾವ ಕಾರಣಕ್ಕೆ ದುರಂತ ಸಂಭವಿಸಿತು? ಎಂಬ ಅಸಲಿ ಕಾರಣವನ್ನು ಬಹಿರಂಗಪಡಿಸುತ್ತದೆ. ಇದೊಂದು ರೆಕಾರ್ಡಿಂಗ್ ಸಾಧನ. ಇದು ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್ಪಿಟ್ ಧ್ವನಿ ರೆಕಾರ್ಡರ್ ಅನ್ನು ಒಳಗೊಂಡಿದೆ. ದುರಂತದ ಇಂಚಿಂಚೂ ಮಾಹಿತಿ ಪತ್ತೆಹಚ್ಚುವ ತನಿಖೆಗೆ ಇದು ಉಪಯುಕ್ತ.
ವಿಮಾನ ದುರಂತಕ್ಕೆ ಏನು ಕಾರಣ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಇಂತಹ ಅಪಘಾತಗಳು ಸಂಭವಿಸದಂತೆ ತಡೆಗಟ್ಟಲು ಈ ಕಪ್ಪು ಬಾಕ್ಸ್ ಸಹಾಯ ಮಾಡುತ್ತದೆ. ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ವಿಮಾನದ ವೇಗ, ಭೂಮಿಯ ಅಂತರದಿಂದ ಇರುವ ಎತ್ತರ, ದಿಕ್ಕು ಮತ್ತು ಇತರ ಪ್ರಮುಖ ಮಾಹಿತಿಯನ್ನು ದಾಖಲಿಸಿಕೊಳ್ಳುತ್ತದೆ. ಕಾಕ್ಪಿಟ್ ಧ್ವನಿ ರೆಕಾರ್ಡರ್ ಪೈಲಟ್ ಮತ್ತು ಇತರ ಸಿಬ್ಬಂದಿ ಸದಸ್ಯರ ನಡುವಿನ ಸಂಭಾಷಣೆಯನ್ನು ದಾಖಲಿಸುತ್ತದೆ.
ಹೆಸರಿಗೆ ಬ್ಲ್ಯಾಕ್ ಬಾಕ್ಸ್ ಎಂದು ಕರೆಯಲ್ಪಟ್ಟರೂ ನೋಡಲು ಇದು ಕೇಸರಿ ಬಣ್ಣದಲ್ಲಿರುತ್ತವೆ. ವಿಮಾನ ಸುಟ್ಟುಹೋದರೂ ಸಹ, ಎಲ್ಲಾ ಅಪಾಯಗಳನ್ನು ತಡೆದುಕೊಳ್ಳುವಂತೆ ಈ ಪೆಟ್ಟಿಗೆಯನ್ನು ವಿಶೇಷವಾಗಿ ರಚಿಸಲಾಗಿದೆ. ಇದರ ಎರಡು ರೆಕಾರ್ಡರ್ಗಳನ್ನು ವಿಶೇಷವಾಗಿ ತೀವ್ರ ಶಾಖ, ನೀರಿನ ಒತ್ತಡ ಮತ್ತು ಸ್ಫೋಟಗಳನ್ನು ತಡೆದುಕೊಳ್ಳುವಂತೆ ರೂಪಿಸಲಾಗಿದೆ ಎಂಬ ಸಂಗತಿ ಹುಬ್ಬೇರಿಸುವಂತದ್ದು.
ಪ್ರಸ್ತುತ ಮಾಹಿತಿ ಪ್ರಕಾರ, ಏರ್ ಇಂಡಿಯಾ ವಿಮಾನದಲ್ಲಿ ಬ್ಲ್ಯಾಕ್ ಬಾಕ್ಸ್ಗಾಗಿ ಶೋಧಕಾರ್ಯ ಮುಂದುವರೆದಿದೆ. ರಕ್ಷಣಾ ಕಾರ್ಯ ಪೂರ್ಣಗೊಂಡ ಕೂಡಲೇ ಇದನ್ನು ವಶಕ್ಕೆ ಪಡೆಯಲಾಗುವುದು. ಈ ಬಾಕ್ಸ್ ಅನ್ನು DGCA ಅಥವಾ AAIB ಪ್ರಯೋಗಾಲಯಕ್ಕೆ ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಕಳಿಸಲಾಗುವುದು. ಅಲ್ಲಿ, ಮೆಮೊರಿ ಡೇಟಾವನ್ನು ಡಿಕೋಡ್ ಮಾಡಲಾಗುತ್ತದೆ. ಆಡಿಯೋ ಮತ್ತು ಇತರೆ ಡೇಟಾಗಳನ್ನು ಹೊರತೆಗೆಯಲಾಗುತ್ತದೆ. ಇದನ್ನು ರಾಡಾರ್ ಮತ್ತು ATC ಲಾಗ್ಗಳಿಗೆ ಲಿಂಕ್ ಮಾಡಿ ಅಪಘಾತದ ಹಿಂದಿರುವ ಪೂರ್ಣ ಕಾರಣಗಳನ್ನು ತಿಳಿಯಲಾಗುವುದು. ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಒಂದು ವಾರದ ಅಗತ್ಯವಿರುತ್ತದೆ.
ಹಿಂದೆ, ಜರ್ಮನ್ವಿಂಗ್ಸ್ ವಿಮಾನ ಅಪಘಾತ (2015), ಮಲೇಷ್ಯಾ ಏರ್ಲೈನ್ಸ್ ವಿಮಾನ ಅಪಘಾತ ಪ್ರಕರಣಗಳು ಮತ್ತು 2020ರ ಕೋಝಿಕ್ಕೋಡ್ ವಿಮಾನ ಅಪಘಾತದ ತನಿಖೆಯಲ್ಲಿ ಇದೇ ಬ್ಲ್ಯಾಕ್ಬಾಕ್ಸ್ ಪ್ರಮುಖ ಸಾಧನವಾಗಿತ್ತು. ಆಗಲೂ, ಪೈಲಟ್ನ ನಿರ್ಧಾರಗಳು ಮತ್ತು ರನ್ವೇ ಸ್ಥಿತಿಗತಿಗಳಲ್ಲಿ ಆದ ತೊಂದರೆಗಳು ಈ ಬಾಕ್ಸ್ ಮೂಲಕವೇ ತಿಳಿದುಬಂದಿತ್ತು. ಪುರಾವೆಗಳಿಲ್ಲದೆ ಸಂಭವಿಸಿದ ಅಪಘಾತಗಳಲ್ಲಿ ಬ್ಲ್ಯಾಕ್ಬಾಕ್ಸ್ ಪ್ರಕರಣವನ್ನು ಬೇಧಿಸಿದ ನಿದರ್ಶನಗಳು ಹಲವು. ಸದ್ಯ ಈ ಕೇಸ್ನಲ್ಲಿ ಏನಾಗಲಿದೆ ಎಂಬುದೇ ರೋಚಕ,(ಏಜೆನ್ಸೀಸ್).