
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಸಾಧನೆಗೆ ಶೂನ್ಯ ಅಂಕ ನೀಡಿರುವ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಸಂಸದ ಗೋವಿಂದ ಕಾರಜೋಳ ಅವರು, ಸಿದ್ದರಾಮಯ್ಯಗೆ ಮೋದಿ ಸರ್ಕಾರದ ಮೌಲ್ಯಮಾಪನ ಮಾಡುವ ನೈತಿಕತೆ ಇಲ್ಲ ಎಂದು ಟೀಕಿಸಿದ್ದಾರೆ.
ಅಲ್ಲದೇ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಎರಡು ವರ್ಷ ಆಯಿತು. ಅತೀ ಹೆಚ್ಚು ಬಜೆಟ್ ಮಂಡಿಸಿದ್ದಾಗಿ ಹೇಳುವ ಸಿದ್ದರಾಮಯ್ಯ ಅವರು ಮೊದಲು ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಸವಾಲೆಸೆದರು.
ಬಜೆಟ್‌ನಲ್ಲಿ ಯೋಜನಾ ವೆಚ್ಚ ಹಾಗೂ ಯೋಜನೇತರ ವೆಚ್ಚವೆಂಬ ಎರಡು ಭಾಗಗಳಿರುತ್ತವೆ. ಈ ಯೋಜನಾ ವೆಚ್ಚದಲ್ಲಿ ಸಿದ್ದರಾಮಯ್ಯ ಇರಿಸಿದ ಅನುದಾನ ಎಷ್ಟು? ಅದರಲ್ಲಿ ಏನೆಲ್ಲ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆಂಬುದನ್ನು ಬಹಿರಂಗಪಡಿಸಲಿ ಎಂದರು.
ರಾಜ್ಯದ ಆಲಮಟ್ಟಿ ಯೋಜನೆಗೆ ಎಷ್ಟು ಕೋಟಿ ಕೊಟ್ಟಿದ್ದೀರಿ? 130 ಟಿಎಂಸಿ ನೀರು ಪಡೆಯಲು ಎಲ್ಲ ತಯಾರಿ ಮಾಡಿಕೊಳ್ಳುವುದಾಗಿ ಹೇಳಿದವರು ಈವರೆಗೆ ಏನು ಮಾಡಿದ್ದೀರಿ? ಯೋಜನೆಯ ಮೇಲಿನ ಬ್ಯಾಂಕ್ ಸಾಲದ ಅಸಲು ಬಡ್ಡಿ ಸಹ ಕೊಡಲಾಗುತ್ತಿಲ್ಲವೆಂದು ಹರಿಹಾಯ್ದರು.
ರಾಜ್ಯದಲ್ಲಿ ಕೊಲೆ ಸುಲಿಗೆ ವ್ಯಾಪಕವಾಗಿವೆ. ಕಾಂಗ್ರೆಸ್ ಅವಧಿಯಲ್ಲಿ 3400 ರೈತರು, 713 ಬಾಣಂತಿಯರ ಸಾವಾಗಿದೆ. 779 ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣದ ವರದಿಯಾಗಿವೆ. ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ 11 ಜನ ಮೃತರಾದರು. ಯಾವ ನೈತಿಕತೆ ಇಟ್ಟುಕೊಂಡು ಮೋದಿ ಸರ್ಕಾರದ ಬಗ್ಗೆ ಪ್ರಶ್ನೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಜಾತಿ ಸಮೀಕ್ಷೆ
ಮರು ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಾರಜೋಳ ಅವರು, ಜಾತಿ ಸಮೀಕ್ಷೆಗೆ ನಾವು ವಿರೋಧ ಮಾಡಿದ್ದೇವೆ ಎಂದು ಹೇಳುವುದು ಮೂರ್ಖತನವಾದೀತು. ಈ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿಯೇ ಮೂರು ಗುಂಪು ಇದೆ. ಅವರೇ ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದರು.
ಬಿಜೆಪಿಯೂ ಜಾತಿ ಗಣತಿ ಬಗ್ಗೆ ಪ್ರಸ್ತಾಪಿಸಿದೆಯಾದರೂ ಕಾಂಗ್ರೆಸ್‌ನಂತೆ ಗಿಮಿಕ್ ಮಾಡುವ ಉದ್ದೇಶ ಅದರಲ್ಲಿಲ್ಲ. ಜಾತಿ-ಧರ್ಮಗಳ ಮಧ್ಯೆ ಒಡಕು ಉಂಟು ಮಾಡುವ ಉದ್ದೇಶ ಬಿಜೆಪಿಗೆ ಇಲ್ಲ. ಈಗಾಗಲೇ ಶೇ. 33 ರಷ್ಟು ಮಹಿಳಾ ಮೀಸಲಾತಿ ಕಲ್ಪಿಸುವ ಬಿಲ್ ಲೋಕಸಭೆಯಲ್ಲಿ ಮಂಡನೆಯಾಗಿದೆ. ಅದನ್ನು ಅನುಷ್ಟಾನಕ್ಕೆ ತರಲು ಜಾತಿಗಣತಿ ಅವಶ್ಯಕ. ಏಕೆಂದರೆ ಮಹಿಳಾ ಮೀಸಲಾತಿಯಲ್ಲಿಯೂ ಒಳಮೀಸಲಾತಿ ನೀಡುವ ಉದ್ದೇಶ ಹೊಂದಲಾಗಿದೆ. ಅದರಲ್ಲಿರುವ ಎಸ್‌ಸಿ-ಎಸ್‌ಟಿ ಮಹಿಳೆಯರಿಗೆ ಮೀಸಲಾತಿ ನೀಡಬೇಕಿರುವ ಕಾರಣಕ್ಕೆ ಜಾತಿಗಣತಿ ವಿಚಾರ ಪ್ರಸ್ತಾಪಿಸಲಾಗಿದೆ ಎಂದರು.