Ahmedabad plane crash : ಗುಜರಾತಿನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ಪತನಗೊಂಡಿದ್ದು, ಗುಜರಾತಿನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 242 ಮಂದಿ ದುರಂತ ಸಾವಿಗೀಡಾಗಿದ್ದಾರೆ. ಇಂದು (ಜೂನ್ 12) ಮಧ್ಯಾಹ್ನ ಈ ಘೋರ ದುರಂತ ಘಟಿಸಿದೆ.
ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ಗೆ ಮೇಡೇ ಕರೆ ಮಾಡಿತು. ಆದಾಗ್ಯೂ, ವಿಮಾನದ ನಂತರದ ಪ್ರತಿಕ್ರಿಯೆ ಪಡೆಯಲು ಎಟಿಸಿಯಿಂದ ಸಾಧ್ಯವಾಗಲಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ತಿಳಿಸಿದ್ದಾರೆ. ವಿಮಾನ ಅಪಘಾತಕ್ಕೀಡಾಗುವ ಮೊದಲು ಮಾಡಿದ ಮೇಡೇ ಕರೆ ಅಂದರೆ ಏನು? ಯಾಕೆ ಈ ಕರೆ ಮಾಡುತ್ತಾರೆ? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ವಾಯುಯಾನ ಕ್ಷೇತ್ರದಲ್ಲಿ MAYDAY ಎಂಬುದು ತುರ್ತು ಸಂದರ್ಭಗಳಲ್ಲಿ ಬಳಸಲಾಗುವ ಅಂತಾರಾಷ್ಟ್ರೀಯ ಪರಿಭಾಷೆಯಾಗಿದೆ. ವಿಮಾನವು ಅಪಾಯದಲ್ಲಿದ್ದಾಗ ಮಾತ್ರ ಇದನ್ನು ಬಳಸಲಾಗುತ್ತದೆ. ವಾಯುಯಾನ ಪರಿಭಾಷೆಯಲ್ಲಿ, ಇದನ್ನು “ತುರ್ತು ಸಂಕೇತ” ಎಂದು ಪರಿಗಣಿಸಲಾಗುತ್ತದೆ.
“ಮೇಡೇ” ಎಂಬ ಪದವು ಫ್ರೆಂಚ್ ಪದ “ಮೈಡರ್” (ನನಗೆ ಸಹಾಯ ಮಾಡಿ) ದಿಂದ ಬಂದಿದೆ. ಇದರ ಅರ್ಥ “ನನಗೆ ಸಹಾಯ ಮಾಡಿ” ಎಂದು. ಈ ಸಂಕೇತವನ್ನು ಸಾಮಾನ್ಯವಾಗಿ ರೇಡಿಯೋ ಮೂಲಕ ATC ಅಥವಾ ಹತ್ತಿರದ ಇತರ ವಿಮಾನಗಳಿಗೆ ರವಾನಿಸಲಾಗುತ್ತದೆ. ಸಂಕಷ್ಟದಲ್ಲಿರುವ ವಿಮಾನವು ಸಹಾಯವನ್ನು ಕೋರಿದಾಗ ಈ ಸಂಕೇತವನ್ನು ಬಳಸಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ವಿಮಾನಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಲು ಇದನ್ನು ಬಳಸಲಾಗುತ್ತದೆ.
ಮೇಡೇ ಕರೆಯನ್ನು ಯಾವಾಗ ನೀಡಲಾಗುತ್ತೆ?
ವಿಮಾನದ ಇಂಜಿನ್ ವಿಫಲವಾದಾಗ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಉಂಟಾದಾಗ, ವಿಮಾನದಲ್ಲಿ ಅಸಮರ್ಪಕ ಕಾರ್ಯ ಉಂಟಾದಾಗ, ವಿಮಾನದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದಂತಹ ಸಂದರ್ಭಗಳಲ್ಲಿ ಪೈಲಟ್ ಈ ಸಂಕೇತವನ್ನು ಕಳುಹಿಸುತ್ತಾರೆ.
MAYDAY ಕರೆ ಬಂದ ನಂತರ ಏನು ಮಾಡಬೇಕು?
ಈ ಕರೆ ಬಂದ ತಕ್ಷಣ ATC ಮತ್ತು ಸಂಬಂಧಿತ ಅಧಿಕಾರಿಗಳು ಸಹಾಯ ಒದಗಿಸಲು ತ್ವರಿತ ಕ್ರಮ ಕೈಗೊಳ್ಳುತ್ತಾರೆ. ವಿಮಾನವನ್ನು ಅಪಾಯದಿಂದ ರಕ್ಷಿಸಲು ಅಗತ್ಯವಾದ ತಾಂತ್ರಿಕ ಸಹಾಯವನ್ನು ಒದಗಿಸಲು ಅವರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.
ಏರ್ ಇಂಡಿಯಾ AI171 ವಿಮಾನದ ಪೈಲಟ್‌ಗಳಿಂದ ATCಗೆ ಮೇಡೇ ಕರೆ ಬಂದಿದೆ ಎಂದು ನಾಗರಿಕ ವಿಮಾನಯಾನ ಮೂಲಗಳು ಈಗಾಗಲೇ ತಿಳಿಸಿವೆ. ಆದಾಗ್ಯೂ, ಮೇಡೇ ಕರೆಯ ನಂತರ ATC ಪೈಲಟ್‌ಗಳನ್ನು ಸಂಪರ್ಕಿಸಲು ಪ್ರಯತ್ನಿಸಿತು, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದಾದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ ಎಂದು ಡಿಜಿಸಿಎ ಹೇಳಿದೆ.
ಅಹಮದಾಬಾದ್ನಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಹಮದಾಬಾದ್ ನಗರದ ಪೊಲೀಸ್ ಮುಖ್ಯಸ್ಥರು ತಿಳಿಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿ ಮಾಡಿದೆ. ಬೋಯಿಂಗ್ 787-8 ಡ್ರೀಮ್‌ಲೈನರ್ ಹೆಸರಿನ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ಯುತ್ತಿತ್ತು. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಈ ದುರ್ಘಟನೆ ಸಂಭವಿಸಿದೆ. ಪತನದ ಪ್ರದೇಶದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿತ್ತು. ಏಳು ಅಗ್ನಿಶಾಮಕ ವಾಹನಗಳು ಸೇರಿದಂತೆ ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಮೃತ 242 ಮಂದಿಯಲ್ಲಿ 169 ಮಂದಿ ಭಾರತೀಯರು, 53 ಮಂದಿ ಬ್ರಿಟೀಷ್ ಪ್ರಜೆಗಳು, 7 ಮಂದಿ ಪೋರ್ಚುಗಲ್ ಮತ್ತು ಕೆನಾಡದ ಒಬ್ಬರೆಂದು ತಿಳಿದುಬಂದಿದೆ.
ಆನ್‌ಲೈನ್ ಫ್ಲೈಟ್ ಟ್ರ್ಯಾಕರ್‌ನಲ್ಲಿ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣದ ಕಡೆಗೆ ಮಧ್ಯಾಹ್ನ 1.38ಕ್ಕೆ ಟೇಕಾಫ್ ಆಯಿತು. ಇದಾದ 5 ನಿಮಿಷದಲ್ಲಿ ವಿಮಾನ ಪತನಗೊಂಡಿದೆ. ಮೇಘನಿಗಢದ ಘೇಡಾಸರ್ ಕ್ಯಾಂಪ್ ಪ್ರದೇಶದ ವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿತು. ಇದರಿಂದಾಗಿ ಎರಡು ಬಹುಮಹಡಿ ಕಟ್ಟಡಗಳು ಹಾನಿಗೊಳಗಾಗಿದ್ದು, ಆ ಕಟ್ಟಡಗಳಲ್ಲಿದ್ದ ಅನೇಕ ಜನರು ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಅಲ್ಲದೆ, ಕೆಲ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ವಿಮಾನವು ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ನೇತೃತ್ವದಲ್ಲಿ ಪ್ರಥಮ ಅಧಿಕಾರಿ ಕ್ಲೈವ್ ಕುಂದರ್ ಅವರ ನೇತೃತ್ವದಲ್ಲಿ ಪ್ರಯಾಣ ಬೆಳೆಸಿತ್ತು. ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರಿಗೆ 8200 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು. ಸಹ ಪೈಲಟ್‌ಗೆ 1100 ಗಂಟೆಗಳ ಹಾರಾಟದ ಅನುಭವವಿತ್ತು. ವಿಮಾನ ಪತನದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಗುಜರಾತ್ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಏನಿದು ಬ್ಲ್ಯಾಕ್ ಬಾಕ್ಸ್!? ದುರಂತಕ್ಕೀಡಾದ ವಿಮಾನದಲ್ಲಿ ಇದು ಸಿಕ್ಕರೆ ಅಪಘಾತದ ಕಾರಣಗಳು ಬಹಿರಂಗ | Black Box