Ahmedabad Plane Crash : ಆಕೆ ತನ್ನ ಗಂಡನಿಗಾಗಿ ತನ್ನ ವೈದ್ಯ ಕೆಲಸವನ್ನೇ ತ್ಯಜಿಸಿದಳು. ಇಡೀ ಕುಟುಂಬದೊಂದಿಗೆ ಒಂದೇ ಸ್ಥಳದಲ್ಲಿ ಸಂತೋಷದಿಂದ ನೆಲೆಸಲು ಯೋಜಿಸಿದ್ದಳು. ಅದೇ ಖುಷಿಯಲ್ಲಿ ತನ್ನ ಮಕ್ಕಳು ಮತ್ತು ಪತಿಯೊಂದಿಗೆ ಲಂಡನ್‌ಗೆ ಹೊರಟಳು. ಅಲ್ಲಿ ಹೊಸ ಜೀವನವನ್ನು ಪ್ರಾರಂಭಿಸುವ ಅನೇಕ ಕನಸುಗಳನ್ನು ಹೊಂದಿದ್ದರು. ಆದರೆ, ವಿಧಿ ಯೋಚನೆ ಬೇರೆಯದೇ ಇತ್ತು. ವಿಮಾನ ಅಪಘಾತವು ಕುಟುಂಬದ ಭರವಸೆಯನ್ನೇ ಛಿದ್ರಗೊಳಿಸಿದೆ. ಗುಜರಾತಿನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ವಿಮಾನ ಪತನದಲ್ಲಿ ಪತ್ನಿ, ಪತಿ ಮತ್ತು ಅವರ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ದುರಂತ ಸಾವಿಗೀಡಾಗಿದ್ದಾರೆ. ಈ ಹೃದಯವಿದ್ರಾವಕ ಘಟನೆ ಎಲ್ಲರ ಕಣ್ಣಲ್ಲೂ ನೀರು ತುಂಬಿಸಿದೆ.
ದೂರದ ಲಂಡನ್‌ನಲ್ಲಿ ಹೊಸ ಜೀವನ ಆರಂಭಿಸಲು ಹೊರಟಿದ್ದ ರಾಜಸ್ಥಾನದ ಬನ್ಸ್ವಾರಾ ಮೂಲದ ಇಡೀ ಕುಟುಂಬ ನಿನ್ನೆ (ಜೂನ್ 12) ಸಂಭವಿಸಿದ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದೆ. ವಿಮಾನ ಅಪಘಾತದಲ್ಲಿ ಮೃತಪಟ್ಟವರಲ್ಲಿ 10 ಜನರು ರಾಜಸ್ಥಾನದವರು. ಅವರಲ್ಲಿ ಐವರು ಪ್ರತೀಕ್ ಜೋಶಿ ಅವರ ಕುಟುಂಬದವರಾಗಿದ್ದು, ಸ್ಥಳೀಯರಲ್ಲಿ ತೀವ್ರ ದುಃಖ ಉಂಟು ಮಾಡಿದೆ.
ಸಾಫ್ಟ್ವೇರ್ ಉದ್ಯೋಗಿ ಆಗಿದ್ದ ಪ್ರತೀಕ್ ಜೋಶಿ ಕಳೆದ ಆರು ವರ್ಷಗಳಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಮತ್ತು ಮಕ್ಕಳು ರಾಜಸ್ಥಾನದಲ್ಲಿ ವಾಸವಿದ್ದರು. ಲಂಡನ್‌ನಲ್ಲಿದ್ದ ಪ್ರತೀಕ್, ತಮ್ಮ ಪತ್ನಿ ಮತ್ತು ಮೂವರು ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸುವ ಕನಸು ಕಂಡಿದ್ದರು. ಅದಕ್ಕಾಗಿ ತುಂಬಾ ಶ್ರಮಿಸಿದರು. ಕೊನೆಗೆ, ಅವರ ಕನಸು ನನಸಾಗುವ ಸಮಯ ಬಂದಿತು. ತಮ್ಮ ಕುಟುಂಬದೊಂದಿಗೆ ಲಂಡನ್‌ಗೆ ತೆರಳಿ ನೆಲೆಸಲು ಸಿದ್ಧರಾಗಿದ್ದರು. ಆದರೆ, ವಿಧಿ ಬೇರೆಯದ್ದೇ ಯೋಜನೆಗಳನ್ನು ಹೊಂದಿತ್ತು. ಇಡೀ ಕುಟುಂಬವೇ ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದೆ.
ಪ್ರತೀಕ್ ಅವರ ಪತ್ನಿ ಕೋಮಿ ವ್ಯಾಸ್ ವೈದ್ಯೆ. ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ವಾಸವಿದ್ದರು. ವೈದ್ಯೆಯಾಗಿ ಸೇವೆ ಸಲ್ಲಿಸುತ್ತಾ ಹಲವು ವರ್ಷಗಳಿಂದ ಪತಿಯಿಂದ ದೂರವಿದ್ದರು. ಪತಿ ಲಂಡನ್‌ನಲ್ಲಿ ನೆಲೆಸಿದ ನಂತರ, ಅವರು ಸಹ ಅಲ್ಲಿಗೆ ಹೋಗಲು ಬಯಸಿದ್ದರು. ಆದರೆ, ಕಾಲ ಕೂಡಿ ಬಂದಿರಲಿಲ್ಲ. ಸರಿಯಾದ ಸಮಯ ಬಂದರೂ ಘೋರ ವಿಧಿ ಅವರ ಆಸೆಗಳನ್ನು ಕಸಿದುಕೊಂಡಿತು.
ನಾವೆಲ್ಲರೂ ಒಟ್ಟಿಗೆ ಲಂಡನ್‌ಗೆ ಹೋಗಬೇಕು ಎಂದು ಅವರ ಪತಿ ಹೇಳಿದಾಗ ಕೋಮಿ ವ್ಯಾಸ್ ತುಂಬಾ ಸಂತೋಷಪಟ್ಟರು. ತಮ್ಮ ಪತಿಯೊಂದಿಗೆ ಲಂಡನ್‌ಗೆ ಹೋಗಿ ಅಲ್ಲಿಯೇ ನೆಲೆಸಲು ಸಿದ್ಧರಾದರು. ಇದಕ್ಕಾಗಿ ಅವರು ಎರಡು ದಿನಗಳ ಹಿಂದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಪತಿ ಮತ್ತು ಮಕ್ಕಳೊಂದಿಗೆ ಲಂಡನ್‌ನಲ್ಲಿ ಸಂತೋಷದಿಂದ ಬದುಕುವ ಅನೇಕ ಕನಸುಗಳನ್ನು ಹೊಂದಿದ್ದರು. ಆದರೆ, ಅನಿರೀಕ್ಷಿತವಾಗಿ, ಅವರೆಲ್ಲರೂ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ದಂಪತಿಗೆ ಮೂವರು ಮಕ್ಕಳಿದ್ದರು. ಅವರಲ್ಲಿ ಇಬ್ಬರು ಐದು ವರ್ಷದ ಅವಳಿ ಹೆಣ್ಣುಮಕ್ಕಳು.
ಪ್ರತೀಕ್ ಮತ್ತು ಕೋಮಿ ವ್ಯಾಸ್ ಇಬ್ಬರೂ ಉನ್ನತ ಶಿಕ್ಷಣ ಪಡೆದಿದ್ದರು. ಅವರು ತಮ್ಮ ವೃತ್ತಿಗೆ ತುಂಬಾ ಬದ್ಧರಾಗಿದ್ದರು. ತಮ್ಮ ಮಕ್ಕಳಿಗಾಗಿ ಶ್ರದ್ಧೆ ಹೊಂದಿದ್ದರು. ಅಂತಹ ದಂಪತಿ ಇನ್ನಿಲ್ಲ ಎಂಬ ಸುದ್ದಿಯನ್ನು ಬನ್ಸ್ವಾರಾದ ಜನರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಸ್ನೇಹಿತರು, ಸಂಬಂಧಿಕರು ಮತ್ತು ಸಹೋದ್ಯೋಗಿಗಳು ಈ ಭೀಕರ ಸುದ್ದಿ ಕೇಳಿ ಕಣ್ಣೀರು ಹಾಕುತ್ತಿದ್ದಾರೆ.
ಭಾರತದ ಇತಿಹಾಸದಲ್ಲೇ ಘೋರ ದುರಂತ
ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದೆ. ಗುರುವಾರ (ಜೂನ್ 12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಬೇಕಿದೆ. ಈ ಹಿಂದೆ ಭಾರತದಲ್ಲಿ ಹಲವು ನಾಗರಿಕ ವಿಮಾನ ಪತನ ದುರಂತ ನಡೆದಿದ್ದವಾದರೂ ಈ ಪ್ರಮಾಣದ ಭೀಕರ ಅಪಘಾತ ಇದೇ ಮೊದಲು.
* ಎಲ್ಲಿ ದುರಂತ?: ಅಹಮದಾಬಾದ್ನ ಮೇಘಾನಿ ನಗರ
* ಎಷ್ಟೊತ್ತಿಗೆ?: ಗುರುವಾರ ಮಧ್ಯಾಹ್ನ 1.38
* ಯಾವ ವಿಮಾನ?: ಏರ್ ಇಂಡಿಯಾ ಎ1-171
* ಎಲ್ಲಿಗೆ ಹೊರಟಿತ್ತು?: ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣ
* ಪತನಕ್ಕೆ ಕಾರಣ?: ಪ್ರಾಥಮಿಕ ತನಿಖೆ ಪ್ರಕಾರ ಇಂಜಿನ್ನಲ್ಲಿ ತಾಂತ್ರಿಕ ದೋಷ
* 32 ಸೆಕೆಂಡ್: ಟೇಕ್ ಆಫ್ ಆದ 32 ಸೆಕೆಂಡ್ನಲ್ಲಿ ಪತನ
ವಿಮಾನದಲ್ಲಿದ್ದವರು ಯಾರು?
* 230 ಪ್ರಯಾಣಿಕರು, 12 ಸಿಬ್ಬಂದಿ
* 169-ಭಾರತೀಯರು
* 52 -ಬ್ರಿಟಿಷ್ ಪ್ರಜೆಗಳು
* 7- ಪೋರ್ಚುಗಲ್ ಪ್ರಜೆಗಳು
* 1-ಓರ್ವ ಕೆನಡಾ ನಾಗರಿಕ
ವಿಮಾನ ಪತನಕ್ಕೂ ಮುನ್ನವೇ ಪೈಲಟ್ ಮಾಡಿದ ಮೇಡೇ ಕರೆ ಎಂದರೇನು? ಕೊನೇ ಕ್ಷಣದಲ್ಲಿ ಏನಾಯ್ತು? Ahmedabad plane crash