Ahmedabad Plane Crash: ಇಂದು (ಜೂ.12) ಮಧ್ಯಾಹ್ನ 1:45ಕ್ಕೆ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ AI-171 ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಭೀಕರ ಅಪಘಾತಕ್ಕೀಡಾಗಿದೆ. ಮೇಘ್ನಿನಗರ್‌ನ ಘೇಡಾಸರ್ ಕ್ಯಾಂಪ್ ಪ್ರದೇಶದ ವಸತಿ ಪ್ರದೇಶದಲ್ಲಿದ್ದ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಡಿಕ್ಕಿಯಾಗಿದ್ದು, ದುರಂತದಲ್ಲಿ 241 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ಪತನಕ್ಕೆ ಈ ಅಂಶಗಳೇ ಕಾರಣ? ನಿಜವಾಗಿಯೂ ಏನಾಯ್ತು? Ahmedabad Plane Crash
ಅಪಘಾತದ ಸಮಯದಲ್ಲಿ ವಿಮಾನದಲ್ಲಿ 241 ಜನರು (ಪೈಲಟ್ ಮತ್ತು ವಿಮಾನ ಸಿಬ್ಬಂದಿ ಸೇರಿದಂತೆ) ಇದ್ದರು ಎಂದು ಅಧಿಕೃತ ಮೂಲಗಳು ಮಾಹಿತಿ ಹಂಚಿಕೊಂಡಿವೆ. ಭಾರತೀಯ ವಿಮಾನಯಾನ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ದುರಂತ. ಈ ವಿಮಾನ ಅಪಘಾತ ಸಂಭವಿಸಿದ ಬಳಿಕ ಜನರಲ್ಲಿ ಹಲವು ಅನುಮಾನಗಳು ಮೂಡಿವೆ. ಇಂತಹ ದುರಂತಗಳಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಯಾರು ಪರಿಹಾರ ನೀಡುತ್ತಾರೆ? ವಿಮಾನಯಾನ ಸಂಸ್ಥೆಗಳೋ ಅಥವಾ ವಿಮಾ ಕಂಪನಿಗಳೋ? ಒಂದು ವೇಳೆ ಇನ್ಸೂರೆನ್ಸ್ ಮಾಡಿಸದೆ ಇದ್ದರೆ ಬೇರೆ ಯಾವುದಾದರೂ ಮಾರ್ಗವಿದೆಯೇ? ಈ ಕುರಿತಾಗಿ ಇಲ್ಲಿದೆ ಒಂದು ವರದಿ.
ವಿಮಾನಯಾನ ಸಂಸ್ಥೆಗಳ ಜವಾಬ್ದಾರಿಗಳೇನು?
ವಿಮಾನಯಾನ ಸಂಸ್ಥೆಗಳಿಗೂ ಕೆಲವು ಜವಾಬ್ದಾರಿಗಳಿವೆ. 1999ರಲ್ಲಿ ಮಾಂಟ್ರಿಯಲ್ ಕನ್ವೆನ್ಷನ್ ಎಂಬ ಒಪ್ಪಂದವಿದೆ. ಅಂತಾರಾಷ್ಟ್ರೀಯ ವಿಮಾನ ದುರಂತಗಳ ಸಂದರ್ಭದಲ್ಲಿ ಎಷ್ಟು ಪರಿಹಾರವನ್ನು ಪಾವತಿಸಬೇಕು? ಅದರಲ್ಲಿ, ವಿಮಾನಯಾನ ಸಂಸ್ಥೆಗಳ ಜವಾಬ್ದಾರಿಗಳ ಕುರಿತು ಕೆಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ಒಪ್ಪಂದದಲ್ಲಿ ಭಾರತವೂ ಭಾಗಿಯಾಗಿದೆ. ಅಂದರೆ, ಈ ನಿಯಮಗಳು ಭಾರತದಲ್ಲಿ ವಿಮಾನಯಾನ ಸೇವೆಗಳನ್ನು ನಿರ್ವಹಿಸುವ ಕಂಪನಿಗಳಿಗೂ ಅನ್ವಯಿಸುತ್ತವೆ ಎಂದರ್ಥ.
- ಈ ನಿಯಮದ ಪ್ರಕಾರ, ಯಾರಾದರೂ ವಿಮಾನ ಅಪಘಾತದಲ್ಲಿ ಮೃತಪಟ್ಟರೆ, ಅವರ ಕುಟುಂಬಕ್ಕೆ ಸುಮಾರು 1.4 ಕೋಟಿ ರೂ. ಪರಿಹಾರವನ್ನು ಪಾವತಿಸಬೇಕಾಗುತ್ತದೆ.
- ವಿಮಾನ ಅಪಘಾತದಲ್ಲಿ ಕಂಪನಿಯೂ ತಪ್ಪಿತಸ್ಥ ಎಂದು ಕಂಡುಬಂದರೆ, ಪರಿಹಾರವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ವಿಮಾ ಕಂಪನಿಗಳು ಎಷ್ಟರ ಮಟ್ಟಿಗೆ ಹೊಣೆಗಾರರು?
ವಿಮಾನಯಾನ ಸಂಸ್ಥೆಗಳಲ್ಲದೆ, ಕೆಲವು ಸಂದರ್ಭಗಳಲ್ಲಿ ಟ್ರಾವೆಲ್ ವಿಮಾ ಕಂಪನಿಗಳು ಸಹ ಪರಿಹಾರವನ್ನು ಘೋಷಿಸುತ್ತವೆ. ಅಪಘಾತದಲ್ಲಿ ಸಾವು ಅಥವಾ ಗಂಭೀರ ಗಾಯಗಳಾದ ಸಂದರ್ಭದಲ್ಲಿ, ತುರ್ತು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ವಿಮಾನ ವಿಳಂಬ ಅಥವಾ ರದ್ದತಿಯ ಸಂದರ್ಭದಲ್ಲಿ, ಪ್ರಯಾಣಿಕರ ಸಾಮಾನು ನಷ್ಟದ ಸಂದರ್ಭದಲ್ಲಿ ವಿಮಾ ಕಂಪನಿಗಳು ಪರಿಹಾರ ನೀಡುತ್ತವೆ.
ಸಾಮಾನ್ಯವಾಗಿ ವಿಮಾ ಕಂಪನಿಗಳು ನೀಡುವ ಪರಿಹಾರವು ಪ್ರಯಾಣಿಕರ ಮರಣದ ಸಂದರ್ಭದಲ್ಲಿ, 25 ಲಕ್ಷದಿಂದ 1 ಕೋಟಿ ರೂ.ವರೆಗೆ ಇರುತ್ತದೆ. ಶಾಶ್ವತ ಅಂಗವೈಕಲ್ಯದ ಸಂದರ್ಭದಲ್ಲಿ, 5 ಲಕ್ಷದಿಂದ 10 ಲಕ್ಷ ರೂ.ವರೆಗೆ ಪರಿಹಾರ ಸಿಗಲಿದೆ. ಇನ್ನು ಆಸ್ಪತ್ರೆಗೆ ಅನುಗುಣವಾಗಿ, ಚಿಕಿತ್ಸೆಗಾಗಿ ಅಗತ್ಯಬಿದ್ದ ಹಣವನ್ನು ಪಾವತಿಸುತ್ತದೆ. ಈ ನಿಯಮಗಳು ವಿಮಾನ ವಿಮೆಯನ್ನು ತೆಗೆದುಕೊಂಡವರಿಗೆ ಮಾತ್ರ ಅನ್ವಯಿಸುತ್ತವೆ.
ಗಮನಾರ್ಹ ಸಂಗತಿ ಏನೆಂದರೆ, ಅನೇಕ ಭಾರತೀಯರು ವಿಮಾನದಲ್ಲಿ ಪ್ರಯಾಣಿಸುವಾಗ ವಿಮೆಯನ್ನು ತೆಗೆದುಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ಬೇರೆ ಯಾವೆಲ್ಲ ಮಾರ್ಗವಿದೆ? ವಿಮಾನಯಾನ ಸಂಸ್ಥೆಯು ನೀಡುವ ಪರಿಹಾರಕ್ಕೆ ಒಳಪಟ್ಟಿರುತ್ತಾರೆ. ಸರ್ಕಾರವು ಘೋಷಿಸಿದ ಪರಿಹಾರವು ಸಿಗುತ್ತದೆ (ಘೋಷಿಸಿದರೆ ಮಾತ್ರ). ಉದ್ಯೋಗದಾತ ವಿಮೆ (ಕಂಪನಿಯ ಪರವಾಗಿ – ವ್ಯಾಪಾರ ವರ್ಗದಲ್ಲಿ ಪ್ರಯಾಣಿಸುವವರಿಗೆ ಅನ್ವಯ). ಕ್ರೆಡಿಟ್ ಕಾರ್ಡ್ ಲಿಂಕ್ಡ್ ಪ್ರಯಾಣ ವಿಮೆ (ಟಿಕೆಟ್‌ಗಳನ್ನು ಕೆಲವು ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಬುಕ್ ಮಾಡಿದರೆ ಅನ್ವಯ).
ಇದನ್ನೂ ಓದಿ: ಕೋಮು ಸಂಘರ್ಷ ತಡೆಗೆ ವಿಶೇಷ ಕಾರ್ಯಪಡೆಗೆ ಗೃಹ ಸಚಿವರಿಂದ ಚಾಲನೆಗೆ ಸಿದ್ಧತೆ ಪೂರ್ಣ
ಪರಿಹಾರ ಯಾವಾಗ ಪಾವತಿ?
ವಿಮಾನ ಅಪಘಾತದ ಬಳಿಕ ಪರಿಹಾರವನ್ನು ಕೂಡಲೇ ಪಾವತಿಸುವ ಸಾಧ್ಯತೆ ಕಡಿಮೆ. ಕೆಲವೊಮ್ಮೆ ತಿಂಗಳು, ವರ್ಷಗಳೇ ಬೀಳುತ್ತದೆ. ಅದರಲ್ಲೂ ವಿಮಾನ ದುರಂತ ಪ್ರಕರಣ ತನಿಖೆ ಹಂತದಲ್ಲಿದ್ದರೆ ಪರಿಹಾರ ಮುಂದೂಡಿಕೆ ಆಗುವ ಸಾಧ್ಯತೆಗಳು ಹೆಚ್ಚು. ಅಪಘಾತಕ್ಕೆ ಯಾರು ಕಾರಣ ಎಂಬ ಬಗ್ಗೆ ಯಾವುದೇ ಗೊಂದಲವಿದ್ದರೆ ಇನ್ನಷ್ಟು ವಿಳಂಬವಾಗಬಹುದು. ಪ್ರಯಾಣಿಕರಿಗೆ ಯಾವುದೇ ಪ್ರಯಾಣ ವಿಮೆ / ನಾಮಿನಿ ವಿವರಗಳು ಇಲ್ಲದಿದ್ದರೆ ಪರಿಹಾರವನ್ನು ಪಾವತಿಸಲು ಸಾಧ್ಯವಿಲ್ಲ.
ಹಲವು ವಿಮಾ ಸಂಸ್ಥೆಗಳು ಬಸ್, ರೈಲು ಮತ್ತು ವಿಮಾನ ಪ್ರಯಾಣಕ್ಕೆ ವಿಮೆಯನ್ನು ನೀಡುತ್ತವೆ. ಆದರೆ, ಬಹುತೇಕ ಪ್ರಯಾಣಿಕರು ಆ ಆಯ್ಕೆಯನ್ನು ಕಡೆಗಣಿಸುತ್ತಾರೆ. ಕೆಲವರು ಪ್ರಯಾಣ ವಿಮೆಯನ್ನು ತೆಗೆದುಕೊಂಡರೂ, ಅದರಲ್ಲಿ ನಾಮಿನಿ ವಿವರಗಳನ್ನು ಭರ್ತಿ ಮಾಡಿರುವುದಿಲ್ಲ. ವಿಮಾ ತಜ್ಞರು ಹೇಳುವಂತೆ, ದೇಶೀಯ ಅಥವಾ ಅಂತಾರಾಷ್ಟ್ರೀಯ ಪ್ರಯಾಣವಾಗಿರಲಿ, ಪ್ರತಿಯೊಬ್ಬ ಪ್ರಯಾಣಿಕರು ಕಡ್ಡಾಯವಾಗಿ ವಿಮೆಯನ್ನು ತೆಗೆದುಕೊಳ್ಳುವುದು ಒಳಿತು. ವಿಶೇಷವಾಗಿ ನಾಮಿನಿ ವಿವರಗಳನ್ನು ಭರ್ತಿ ಮಾಡುವುದು ಇನ್ನಷ್ಟು ಉತ್ತಮ,(ಏಜೆನ್ಸೀಸ್).