ಅಂದು ಮಗ, ಇಂದು ವಿಜಯ್ ರೂಪಾನಿ! ಮಾಜಿ ಸಿಎಂ ಕುಟುಂಬಕ್ಕೆ ಕಾಡುತ್ತಿದೆಯಾ ಶಾಪ? ಇಬ್ಬರೂ ಕಂಡಿದ್ದು ದುರಂತ ಅಂತ್ಯ | Vijay Rupani

ವಿಜಯವಾಣಿ (1)
Published on

Vijay Rupani: ಇಂದು (ಜೂ.12) ಮಧ್ಯಾಹ್ನ 1:45ಕ್ಕೆ ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ AI-171 ಏರ್​ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಭೀಕರ ಅಪಘಾತಕ್ಕೀಡಾಗಿದೆ. ಮೇಘ್ನಿಗರ್‌ನ ಘೇಡಾಸರ್ ಕ್ಯಾಂಪ್ ಪ್ರದೇಶದ ವಸತಿ ಪ್ರದೇಶದಲ್ಲಿದ್ದ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಡಿಕ್ಕಿಯಾಗಿದ್ದು, ದುರಂತದಲ್ಲಿ 242 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗುಜರಾತ್​ನ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿದ್ದ 242ರ ಪೈಕಿ 241 ಪ್ರಯಾಣಿಕರು ಮೃತಪಟ್ಟಿದ್ದಾರೆಂದು ನಗರ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ, ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ದೆಹಲಿಯಿಂದ ಅಹಮದಾಬಾದ್ ಮೂಲಕ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ವಿಜಯ್ ರೂಪಾನಿ ಕೂಡ ಪ್ರಯಾಣಿಸುತ್ತಿದ್ದರು. ಝಡ್ ಕ್ಲಾಸ್‌ನಲ್ಲಿ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.

ಏನಿದು ಶಾಪ?

ವಿಜಯ್ ರೂಪಾನಿ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ರೂಪಾನಿ ಅವರ ಕಿರಿಯ ಮಗ ಪೂಜಿತ್ ಈ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅವರ ಹೆಸರಿನಲ್ಲಿ ಪೂಜಿತ್ ಸ್ಮಾರಕ ಟ್ರಸ್ಟ್ ಸ್ಥಾಪನೆಯಾಗಿದ್ದು, ಸಮಾಜ ಕಾರ್ಯಗಳನ್ನು ನಡೆಸಲಾಗುತ್ತಿದೆ. ಈಗ ವಿಜಯ್ ರೂಪಾನಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವುದರಿಂದ, ಕುಟುಂಬಕ್ಕೆ ಯಾವುದೋ ಶಾಪ ಕಾಡುತ್ತಿದೆ ಎಂದು ಸಂಬಂಧಿಕರು ಕಳವಳ ವ್ಯಕ್ತಪಡಿಸಿದ್ದಾರೆ.

ಯಾರು ಈ ವಿಜಯ್ ರೂಪಾನಿ?

ವಿಜಯ್ ರೂಪಾನಿ ಅವರು ಗುಜರಾತ್‌ನ 16ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಆಗಸ್ಟ್ 2, 1956ರಂದು ಜನಿಸಿದ ವಿಜಯ್​, ಬಿಜೆಪಿಯ ಹಿರಿಯ ನಾಯಕರು. ಎರಡು ಬಾರಿ ಸಿಎಂ ಆಗಿ ಸೇವೆ ಸಲ್ಲಿಸಿದ ಅವರು, 2016ರಿಂದ 2021ರವರೆಗೆ ಸುಮಾರು ಐದು ವರ್ಷಗಳ ಕಾಲ ಸಿಎಂ ಹುದ್ದೆಯಲ್ಲಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್‌ಕೋಟ್ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಗೆಲುವು ಸಾಧಿಸಿದ್ದರು. ಈಗ ವಿಮಾನ ದುರಂತದಲ್ಲಿ ಸಾವನ್ನಪ್ಪಿರುವುದು ಕುಟುಂಬಕ್ಕೆ ತುಂಬಲಾರದ ನಷ್ಟವನ್ನು ತಂದೊಡ್ಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net