

ರಾಯಚೂರು ಹೊಸ ಸಮವಸ್ತ್ರ, ಶೂ ಧರಿಸಿ ಟಿಪ್ಟಾಪ್ನಿಂದ ಶಾಲೆಗೆ ಹೋಗಬೇಕೆಂಬ ಮಕ್ಕಳ ಕನಸು ಕಂಡಿದ್ದಾರೆ. ಆದರೆ ಶಾಲೆ ಪ್ರಾರಂಭವಾಗಿ ವಾರ ಕಳೆದರು ನನಸಾಗಿಲ್ಲ ! ಮೇ 29 ರಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಅಧಿಕೃತವಾಗಿ ಪ್ರಾರಂಭಗೊಂಡು. ಲಕ್ಷಾಂತರ ಮಕ್ಕಳು ಹೊಸ ತರಗತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಆದರೆ,ಶಾಲಾ ಶಿಕ್ಷಣ ಇಲಾಖೆಯಿಂದ ಸಮವಸ್ತ್ರ ನೀಡದ ಕಾರಣ ಹಳೆ ಬಟ್ಟೆ ಧರಿಸಿಯೇ ಮಕ್ಕಳು ಶಾಲೆ ಕಡೆ ಹೆಜ್ಜೆ ಹಾಕುತ್ತಿದ್ದಾರೆ.
ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕೂಲಿ ಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದವರು, ಗ್ರಾಮಾಂತರ ಭಾಗದವರು ಹಾಗೂ ಬಡ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದುಕೊಂಡಿರುತ್ತಾರೆ. ಬೇಸಿಗೆ ರಜೆ ಮುಗಿದು ಹೊಸ ಶಾಲೆಗೆ ಪ್ರವೇಶ ಪಡೆಯುವಾಗ ಆ ಮಕ್ಕಳು ಹೊಸ ಸಮವಸ್ತ್ರ ಧರಿಸಿಕೊಂಡು ಶಾಲೆಗೆ ತೆರಳಬಹುದೆಂಬ ಕನಸು ಕಟ್ಟಿಕೊಂಡಿರುತ್ತಾರೆ. ಆದರೆ, 2025-26 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ವಾರ ಕಳೆದರು ಶಾಲೆಗಳಿಗೆ ಸಮವಸ್ತ್ರ ಬಂದಿಲ್ಲ. ಶೂ, ಸಾಕ್ಸ್ ಸಿಕ್ಕಿಲ್ಲ. ಇದರಿಂದ ಕೆಲವು ಮಕ್ಕಳು ಕಲರ್ ಬಟ್ಟೆ ಮತ್ತು ಹಲವು ವಿದ್ಯಾರ್ಥಿಗಳು ಕಳೆದ ವರ್ಷದ ಹಳೆ ಸಮವಸ್ತ್ರವನ್ನೆ ಧರಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ.
ಸಮವಸ್ತ್ರ , ಶೂ ಗಾಗಿ ಮಕ್ಕಳ ಕಾಯುವಿಕೆ
ಜಿಲ್ಲಾಧ್ಯಂತ ಪ್ರಸಕ್ತ 2025-06 ನೇ ಸಾಲಿನಲ್ಲಿ 1 ರಿಂದ 10 ನೇ ತರಗತಿ ವರಗೆ ಸುಮಾರು 4,10,649 ವಿದ್ಯಾರ್ಥಿಗಳು ನೊಂದಣಿ ಮಾಡಿಸಿಕೊಂಡಿದ್ದು, ಜಿಲ್ಲೆಯಲ್ಲಿ 227 ಪ್ರೌಢ ಶಾಲೆಗಳು,1,463 ಪ್ರಾಥಮಿಕ ಶಾಲೆಗಳು ಇವೆ. ಈ ಪೈಕಿ ದೇವದುರ್ಗ 64,159,ಲಿಂಗಸೂಗೂರಿನಲ್ಲಿ 85,947, ಮಾನ್ವಿಯಲ್ಲಿ 73,673, ರಾಯಚೂರು 1,12,426, ಸಿಂಧನೂರು 74,444 ವಿದ್ಯಾರ್ಥಿಗಳು ಪ್ರವೇಶ ಪಡೆದ್ಧಾರೆ. ಆದರೆ ಸಮವಸ್ತ್ರ ,ಶೂ ಮಾತ್ರ ದೊರೆತಿಲ್ಲ. ರಾಜಸ್ಥಾನ ಮೂಲದವರಿಗೆ ಟೆಂಡರ್ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದು, ಆದರೆ ಇದುವರೆಗೆ ಮಾಹಿತಿ ನೀಡದೆ ಇರುವುದರಿಂದ ಶಿಕ್ಷಕರು ಮಕ್ಕಳ ಪಾಲಕರಿಗೆ ಮಾಹಿತಿ ನೀಡಲು ಪೇಚೆಗೆ ಸಿಲುಕಿದ್ದಾರೆ.
ಪಾಲಕರ ಆಕ್ರೋಶ
ಮಗ ಪ್ರತಿದಿನ ಹೊಸ ಸಮವಸ್ತ್ರ ತೆಗೆದುಕೊಡಿ ಎಂದು ಮಗ ಹಠ ಮಾಡುತ್ತಿದ್ದಾನೆ. ನಾವು ಬಡವರು. ಕೂಲಿ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದೆವೆ. ಸರ್ಕಾರ ಉಚಿತವಾಗಿ ಬಟ್ಟೆ, ಪುಸ್ತಕ ಕೊಡುತ್ತದೆ ಎಂಬ ಕಾರಣಕ್ಕೆ ಮಗನನ್ನು ಶಾಲೆಗೆ ಸೇರಿಸಿದ್ದೇನೆ. ಆದರೆ, ಈ ವರ್ಷ ಶಾಲೆ ಪ್ರಾರಂಭವಾಗಿ ವಾರ ಕಳೆದರೂ ಇನ್ನೂ ಬಟ್ಟೆ ನೀಡಿಲ್ಲ. ಈ ಹಿಂದೆ ಕೊಡುತ್ತಿದ್ದ ಸೈಕಲ್ ಅನ್ನು ರದ್ದು ಮಾಡಿದೆ. ಈ ರೀತಿಯಾದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಾದರೂ ಹೇಗೆ ನಮಗೆ ಜೀವನ ನಡೆಸಲು ಕಷ್ಟವಾಗಿದೇ ಎಂದು ಪಾಲಕರು ಅಳಲು ತೋಡಿಕೊಂಡಿದ್ದಾರೆ.
ಶಾಲೆಯ ಮಕ್ಕಳ ಸಮವಸ್ತ್ರ ಕುರಿತು ಸರ್ಕಾರದಿಂದ ರಾಜಸ್ಥಾನ ಮೂಲದವರಿಗೆ ಟೆಂಡರ್ ನೀಡಲಾಗಿದೆ. ಆದರಂತೆ ಮಕ್ಕಳಿಗೆ ಶೂ ವಿತರಣೆ ಮಾಡಲು ಶೀಘ್ರದಲ್ಲಿ ಸರ್ಕಾರದಿಂದ ಶಾಲೆಯ ಎಸ್ಡಿಎಂಸಿ ಖಾತೆಗೆ ಹಣ ಜಮಾವಾಗಲಿದ್ದು, ಮಕ್ಕಳಿಗೆ ವಿತರಣೆ ಮಾಡಲಾಗುವುದು.
ಡಾ.ಕೆ.ಡಿ.ಬಡಿಗೇರ್ ಡಿಡಿಪಿಐ ರಾಯಚೂರು