

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ನ 2024ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ್ದು, ವಿಜಯವಾಣಿಯ (Vijayavani) ಡಿಜಿಟಲ್ ವಿಭಾಗದ ಸಂಪಾದಕರಾದ ಸಿದ್ದು ಕಾಳೋಜಿ ಅವರು ಮಾಧ್ಯಮ ಅಕಾಡೆಮಿಯ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿ ಹಾಗೂ ಬೆಂಗಳೂರು ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಸ್ಥಾನಿಕ ಸಂಪಾದಕ ಪ್ರಕಾಶ್ ಶೇಟ್, ದಾವಣಗೆರೆ ಜಿಲ್ಲಾ ವಿಶೇಷ ವರದಿಗಾರ ರಮೇಶ್ ಜಹಗೀರದಾರ್ ಅವರಿಗೆ ಮಾಧ್ಯಮ ಅಕಾಡೆಮಿ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿ ಲಭಿಸಿದೆ. ತುಮಕೂರಿನ ಹಿರಿಯ ವರದಿಗಾರ ಜಗನ್ನಾಥ್ ಕಾಳೇನಹಳ್ಳಿ ಅವರಿಗೆ ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ದೊರಕಿದೆ. ಒಟ್ಟು 30 ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿ ಮತ್ತು 10 ಪತ್ರಕರ್ತರಿಗೆ ವಿವಿಧ ದತ್ತಿ ಪ್ರಶಸ್ತಿಗಳು ಲಭಿಸಿದೆ. 50 ಪತ್ರಕರ್ತರಿಗೆ ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಲಾಗಿದೆ.
ಎಂ.ಬಿ.ಪಾಟೀಲ್ ‘ವರ್ಷದ ವ್ಯಕ್ತಿ’: ರಾಜ್ಯ ಕೈಗಾರಿಕಾ ವಲಯಕ್ಕೆ ನೀಡುತ್ತಿರುವ ಉತ್ತೇಜನವನ್ನು ಪರಿಗಣಿಸಿ ಪ್ರೆಸ್ಕ್ಲಬ್ ಕೊಡಮಾಡುವ ಈ ಸಾಲಿನ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ ಪ್ರಯುಕ್ತ ‘ವಿಶೇಷ ಪ್ರಶಸಿ’ಗೆ ಇಂಧನ ಸಚಿವ ಕೆ.ಜೆ,ಜಾರ್ಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಜಾಣಗೆರೆ ವೆಂಕಟರಾಮಯ್ಯ, ಇಂದೂಧರ ಹೊನ್ನಾಪುರ, ಸುಭಾಶ್ ಕೆವಿನ್ ರೈ, ಜಿ.ಎಸ್.ಕೃಷ್ಣಮೂರ್ತಿ, ಡಾ. ನಾಗೇಶ್ ಬಸವರಾಜ್ ಅವರು ಪ್ರೆಸ್ಕ್ಲಬ್ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
12ಕ್ಕೆ ಪ್ರಶಸ್ತಿ ಪ್ರದಾನ: ಪ್ರೆಸ್ಕ್ಲಬ್ ಆವರಣದಲ್ಲಿ ಜ.12ರ ಸಂಜೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.